ಉಡುಪಿ: ರಾಜ್ಯಾದ್ಯಂತ ಇಂದು ಸಂಭ್ರಮದ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಭಕ್ತಿಯಿಂದ ಆಚರಿಸಲಾಗುತ್ತಿದೆ. ಕೃಷ್ಣ ಜನ್ಮಾಷ್ಟಮಿ ಹಿನ್ನಲೆಯಲ್ಲಿ ಉಡುಪಿಯಲ್ಲಿ ಇಂದು ಸಂಭ್ರಮದ ಶ್ರೀ ಕೃಷ್ಣಾಷ್ಟಮಿ ಮತ್ತು ನಾಳೆ ವೈಭವದ ಶ್ರೀ ಕೃಷ್ಣಲೀಲೋತ್ಸವ, ಮೊಸರುಕುಡಿಕೆ ಹಬ್ಬಗಳು ನಡೆಯಲಿದೆ. ಈ ಎರಡು ದಿನಗಳ ಹಬ್ಬಕ್ಕಾಗಿ ಉಡುಪಿಯಲ್ಲಿ ವಾರದಿಂದಲೇ ಸಿದ್ಧತೆಗಳು ನಡೆಯುತ್ತಿದ್ದು, ಕೃಷ್ಣಮಠ ತಳಿರುತೋರಣ, ಹೂವುಗಳಿಂದ ಶೃಂಗಾರಗೊAಡಿದೆ. ರಥಬೀದಿಯಲ್ಲಿ ಮೊಸರುಕುಡಿಕೆ ಅಥವಾ ವಿಟ್ಲಪಿಂಡಿ ಉತ್ಸವಕ್ಕೆ ಗುರ್ಜಿಗಳು ಸ್ಥಾಪನೆಗೊಂಡಿವೆ, ರಥಗಳು ಕೃಷ್ಣನ ಉತ್ಸವಕ್ಕೆ ಸಿದ್ಧವಾಗಿವೆ.
ಶ್ರೀ ಕೃಷ್ಣನಿಗೆ ಇಂದು ಮಧ್ಯರಾತ್ರಿ ಅರ್ಘ್ಯ ಪ್ರದಾನ ನಡೆಯಲಿದ್ದು, ಪರ್ಯಾಯ ಪುತ್ತಿಗೆ ಶ್ರೀದ್ವಯರು ಈ ಕೃಷ್ಣ ಅವತಾರವೆತ್ತಿದ ಮುಹೂರ್ತದಲ್ಲಿ ಅರ್ಘ್ಯ ಪ್ರದಾನ ಮಾಡಲಿದ್ದಾರೆ. ನಂತರ ಭಕ್ತರು ಈ ಗಳಿಗೆಯನ್ನು ಸೃಷ್ಟಿಸಿದ ಚಂದ್ರನಿಗೆ ಕೃಷ್ಣಮಠದ ತುಳಸಿಕಟ್ಟೆಯಲ್ಲಿ ಅರ್ಘ್ಯ ಪ್ರದಾನ ಮಾಡಲಿದ್ದಾರೆ.
ಬಾಲಕೃಷ್ಣನಿಗೆ ಅರ್ಪಿಸುವುದಕ್ಕಾಗಿ ಕೃಷ್ಣಮಠದ ಪಾಕಶಾಲೆಯಲ್ಲಿ 108 ಬಗೆಯ ಲಡ್ಡುಗಳು ಮತ್ತು ಲಕ್ಷಾಂತರ ಸಂಖ್ಯೆಯಲ್ಲಿ ಚಕ್ಕುಲಿ ತಯಾರಾಗಿವೆ. ಇವುಗಳನ್ನು ಇಂದು ರಾತ್ರಿ ಮಹಾಪೂಜೆಯ ಸಂದರ್ಭದಲ್ಲಿ ಕೃಷ್ಣನಿಗೆ ಅರ್ಪಿಸಿ, ನಾಳೆ ಭಕ್ತರಿಗೆ ವಿತರಿಸಲಾಗುತ್ತದೆ.
ಇಂದು ಕೃಷ್ಣ ಭಕ್ತರು ದಿನವಿಡೀ ಉಪವಾಸವಿದ್ದು, ಕೃಷ್ಣನ ಭಜನೆ, ಪಾರಾಯಣಗಳಲ್ಲಿ ಕಳೆಯಲಿದ್ದಾರೆ. ಕೃಷ್ಣಮಠದಲ್ಲಿ ದಿನವಿಡೀ ಮುದ್ದುಕೃಷ್ಣ – ಮುದ್ದು ರಾಧೆ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಉಡುಪಿ ನಗರದಲ್ಲಂತೂ ಹತ್ತಿಪ್ಪತ್ತಕ್ಕೂ ಹೆಚ್ಚು ಹುಲಿವೇಷಧಾರಿ ತಂಡಗಳು ಕುಣಿದು ಕುಪ್ಪಳಿಸಿ ಜನರಿಗೆ ಮನರಂಜನೆ ನೀಡಲಿದ್ದಾರೆ.
`