ಬೆಂಗಳೂರು : 2022-23ನೇ ಸಾಲಿನ ಎಸ್ ಎಸ್ ಎಲ್ ಸಿ (SSLC) ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಸಿಹಿಸುದ್ದಿ ನೀಡಿದ್ದು, ಈ ಬಾರಿಯೂ ಕೊರೊನಾ ಬ್ಯಾಚ್ ಎಂದು ಪರಿಗಣಿಸಿ ಶೇ. 10 ರಷ್ಟು ಗ್ರೇಸ್ ಅಂಕ ನೀಡುವುದಾಗಿ ತಿಳಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಎಸ್ಎಸ್ ಎಲ್ ಸಿ ಬೊರ್ಡ್ ನಿರ್ದೇಶಕ ರಾಮಚಂದ್ರ, ಈ ಬಾರಿಯೂ ಕೊರೊನಾ ಬ್ಯಾಚ್ ಎಂದು ಪರಿಗಣಿಸಿ ಶೇ.10 ರಷ್ಟು ಗ್ರೇಸ್ ಅಂಕ ನೀಡಲಾಗುವುದು. ಮೂರು ವಿಷಯಗಳಿಗೆ ಮಾತ್ರ ಗ್ರೇಸ್ ಮಾರ್ಕ್ ಅಂಕ ನೀಡಲಾಗುತ್ತದೆ. ತೇರ್ಗಡೆ ಕಡಿಮೆ ಅಂಕ ಪಡೆಯುವ ವಿದ್ಯಾರ್ಥಿಗಳಿಗೆ ಮಾತ್ರ ಇದು ಅನ್ವಯವಾಗಲಿದೆ ಎಂದು ತಿಳಿಸಿದ್ದಾರೆ.
2022-23ನೇ ಸಾಲಿನ ಎಸ್ ಎಸ್ ಎಲ್ ಸಿ ಅಂತಿಮ ಪರೀಕ್ಷೆಗಳು ( SSLC Exam 2023 ) ದಿನಾಂಕ 31-03-2023 ರಿಂದ 15-04-2023ರವರೆಗೆ ನಡೆಯಲಿದೆ. ಎಸ್ ಎಸ್ ಎಲ್ ಸಿ ಪರೀಕ್ಷೆಗೆ 15,498 ಶಾಲೆಗಳಿಂದ 8,42,811 ವಿದ್ಯಾರ್ಥಿಗಳು ನೊಂದಾಯಿಸಿಕೊಂಡಿದ್ದಾರೆ. ಇವರಲ್ಲಿ ಶಾಲಾ ವಿದ್ಯಾರ್ಥಿಗಳು 7,94,611 ಆಗಿದ್ದರೇ ಪುನರಾವರ್ತಿತ ವಿದ್ಯಾರ್ಥಿಗಳು 20,750 ಆಗಿದ್ದಾರೆ. ಖಾಸಗಿ ಅಭ್ಯರ್ಥಿಗಳು 18,272. ಖಾಸಗಿ ಪುನರಾವರ್ತಿತ ಅಭ್ಯರ್ಥಿಗಳು 8,862 ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮಾಹಿತಿ ನೀಡಿದೆ.
8,42,811 ನೋಂದಾಯಿತ ವಿದ್ಯಾರ್ಥಿಗಳಿಗಾಗಿ ರಾಜ್ಯಾಧ್ಯಂತ ಒಟ್ಟು 3,305 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಸರ್ಕಾರಿ ಶಾಲೆಗಳ 3,60,862, ಅನುದಾನಿತ ಶಾಲೆಗಳ 2,20,831 ಹಾಗೂ ಅನುದಾನ ರಹಿತ ಶಾಲೆಗಳ 2,61,811 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಹೇಳಿದೆ.
ಬಿ.ಇ.ಓ ನೇತೃತ್ವದ ಸಮಿತಿಯ ಸಮ್ಮುಖದಲ್ಲಿಯೇ ಪ್ರಶ್ನೆ ಪತ್ರಿಕೆಗಳನ್ನು ಆಯಾ ತಾಲೂಕು ಖಜಾನೆಗಳಿಂದ ಪರೀಕ್ಷೆ ಕೇಂದ್ರಗಳಿಗೆ ರವಾನಿಸಬೇಕು. ಇತರೆ ಕಾರಣಗಳಿಗೆ ಖಜಾನೆಯ ಸ್ಟ್ರಾಂಗ್ ರೂಮ್ ತೆರೆಯುವ ಪ್ರಸಂಗ ಬಂದರೆ, ಬಿ.ಇ.ಓ ನೇತೃತ್ವದ 3 ಜನರ ಸಮಿತಿ ಮಾಹಿತಿ ನೀಡಿ ಅವರ ಹಾಜರಿಯಲ್ಲಿ ಸ್ಟ್ರಾಂಗ್ ರೂಮ್ ತೆರೆಯಬೇಕು. ಪ್ರಶ್ನೆ ಪತ್ರಿಕೆಗಳಿಗೆ ಯಾವುದೇ ರೀತಿಯಲ್ಲಿ ಹಾನಿ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು ಇಲಾಖೆ ಸೂಚನೆ ನೀಡಿದೆ.
ಎಸ್.ಎಸ್.ಎಲ್‍ಸಿ. ಪರೀಕ್ಷಾ ಕೇಂದ್ರಗಳಿಗೆ ಅಗತ್ಯ ಇರುವ ಪೊಲೀಸ್ ಸಿಬ್ಬಂದಿ ನೇಮಕ ಮಾಡಬೇಕು. ಪರೀಕ್ಷಾ ಕೇಂದ್ರದ ಸುತ್ತ ನಿಷೇಧಾಜ್ಞೆ ಹೊರಡಿಸಲಾಗಿರುತ್ತದೆ. ಪರೀಕ್ಷೆ ಬರೆಯವ ವಿದ್ಯಾರ್ಥಿ ಹಾಗೂ ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಿದ ಸಿಬ್ಬಂದಿಗಳನ್ನು ಹೊರತು ಪಡೆಸಿ ಅನ್ಯರು ಪರೀಕ್ಷಾ ಕೇಂದ್ರದ ಒಳಗೆ ಪ್ರವೇಶಿಸುವಂತಿಲ್ಲ. ನಕಲು ಹಾಗೂ ಇತರೆ ಅಕ್ರಮಗಳು ನಡೆಯದಂತೆ ಕಡಿವಾಣ ಹಾಕಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಎಲ್ಲಾ ರೀತಿಯ ಮೂಲಭೂತ ಸೌರ್ಯಗಳ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು. ಪರೀಕ್ಷಾ ಕೇಂದ್ರದಲ್ಲಿ ಯಾವುದೇ ರೀತಿಯ ಪೋನ್, ಸ್ಮಾರ್ಟ್ ಫೋನ್ ಹಾಗೂ ಎಲೆಕ್ಟ್ರಿಕಲ್ ವಸ್ತುಗಳನ್ನು ಕೊಂಡಯ್ಯಲು ಅವಕಾಶವಿಲ್ಲ. ಪರೀಕ್ಷಾ ಕೊಠಡಿಗಳಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸೂಕ್ತ ಆಸನದ ವ್ಯವಸ್ಥೆ ಕಲ್ಪಿಸಬೇಕು. ಪ್ರತಿ ಕೊಠಡಿಯಲ್ಲೂ ಗಡಿಯಾರ ಇರಬೇಕು.
ವಿದ್ಯಾರ್ಥಿಗಳು ಸಮವಸ್ತ್ರಧರಿಸಿ ಪರೀಕ್ಷಾ ಕೊಠಡಿಗೆ ಹಾಜರಾಗಬೇಕಿದ್ದು, ಹಿಜಾಬ್ ಧರಿ ಬಂದರೆ ಪರೀಕ್ಷೆಗೆ ಅವಕಾಶ ಇರುವುದಿಲ್ಲ. ಕನಿಷ್ಟ ಒಂದು ಗಂಟೆಗೂ ಮೊದಲೇ ಪರೀಕ್ಷಾ ಕೇಂದ್ರಗಳಿಗೆ ಪ್ರವೇಶ ಪತ್ರದ ಜತೆಗೆ ತೆರಳಿ ಪರೀಕ್ಷಾ ಕೊಠಡಿಯನ್ನು ಹುಡಿಕಿಕೊಳ್ಳಬೇಕಿದೆ