ಬೆಂಗಳೂರು: ರಾಜ್ಯದಲ್ಲಿ ವಿಪರೀತವಾಗಿ ಹೆಚ್ಚುತ್ತಿರುವ ಬಿಸಿಲ ಝಳದಿಂದ ಪುಟಾಣಿ ಮಕ್ಕಳು ಹೈರಾಣಾಗಿದ್ದು,ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಅಂಗನವಾಡಿ ಕೇಂದ್ರಗಳ ಸಮಯದಲ್ಲಿ ಬದಲಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.
ಈ ಹಿಂದೆ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಮಾತ್ರ ಅನ್ವಯವಾಗಿದ್ದ ಅಂಗನವಾಡಿ ಕೇಂದ್ರಗಳ ಕಾರ್ಯನಿರ್ವಹಣಾ ಸಮಯ ಬದಲಾವಣೆಯನ್ನು ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆದೇಶವನ್ನು ಹೊರಡಿಸಿದೆ.
ಬಿಸಿಲಿನ ಝಳದಿಂದ ಬೆಳಗ್ಗೆ 8 ರಿಂದ ಮಧ್ಯಾಹ್ನ 12 ರವರೆಗೂ ನಿಗದಿಪಡಿಸಲಾಗಿತ್ತು. ಬಿಸಿಲ ಪ್ರತಾಪ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಉಳಿದ ಜಿಲ್ಲೆಗಳಿಗೂ ವಿಸ್ತರಿಸಬೇಕು ಎನ್ನುವ ಮನವಿಯ ಹಿನ್ನೆಲೆಯಲ್ಲಿ ಏ.15 ರಿಂದ ಮೇ 10 ರವರೆಗೂ ರಾಜ್ಯಾದ್ಯಂತ ಇದೇ ಸಮಯವನ್ನು ವಿಸ್ತರಿಸಲಾಗಿದೆ. ಅಂಗನವಾಡಿ ಸಿಬ್ಬಂದಿಗೆ ಮೇ 11 ರಿಂದ 26 ವರೆಗೂ ಬೇಸಿಗೆ ರಜೆ ನೀಡಲಾಗಿದೆ.
ಬೇಸಿಗೆ ಮುಗಿದ ಬಳಿಕ ಅಂಗನವಾಡಿಗಳು ಎಂದಿನಂತೆ ಬೆಳಗ್ಗೆ 9.30 ರಿಂದ ಸಂಜೆ 4 ಗಂಟೆಯವರೆಗೂ ಕಾರ್ಯ ನಿರ್ವಹಿಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.