Share this news

ಬೆಂಗಳೂರು: ಸಂಸತ್ತಿನ ಮುಂಗಾರು ಅಧಿವೇಶನ ಇದೇ ಜುಲೈ 21ರಿಂದ ಆರಂಭವಾಗಲಿದ್ದು, ಇತ್ತ ಕರ್ನಾಟಕ ವಿಧಾನ ಮಂಡಲದ ಮುಂಗಾರು ಅಧಿವೇಶನ ಆಗಸ್ಟ್ 11ರಿಂದ ಆರಂಭವಾಗಲಿದೆ.

ಈ ಬಗ್ಗೆ ರಾಜ್ಯ ಸರ್ಕಾರದ ಸಂಸದೀಯ ವ್ಯವಹಾರಗಳ ಕಾರ್ಯದರ್ಶಿ ಜಿ.ಶ್ರೀಧರ್ ಅಧಿಸೂಚನೆ ಹೊರಡಿಸಿದ್ದು, ಭಾರತ ಸಂವಿಧಾನದ 174ನೇ ಅನುಚ್ಛೇದದ (1)ನೇ ಖಂಡದ ಮೂಲಕ ನನಗೆ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ಥಾವರ್ ಚಂದ್ ಗೆಹ್ಲೋಟ್, ಕರ್ನಾಟಕ ರಾಜ್ಯಪಾಲರು ಆದ ನಾನು 2025ರ ಆಗಸ್ಟ್ 11ರಂದು ಸೋಮವಾರ ಬೆಳಗ್ಗೆ 11ಕ್ಕೆ ಬೆಂಗಳೂರಿನಲ್ಲಿ ಕರ್ನಾಟಕ ವಿಧಾನಮಂಡಲದ ಅಧಿವೇಶನ ಸಮಾವೇಶಗೊಳಿಸಬೇಕೆಂದು ಈ ಮೂಲಕ ಕರೆಯುತ್ತಿದ್ದೇನೆ ಎಂಬುದಾಗಿ ತಿಳಿಸಿದ್ದಾರೆ. ಆಗಸ್ಟ್ 11 ರಂದು ಬೆಳಗ್ಗೆ 11 ಗಂಟೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ವಿಧಾನಸಭೆ ಹಾಗೂ ವಿಧಾನಪರಿಷತ್ ನ ಜಂಟಿ ಅಧಿವೇಶವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಆರ್ ಸಿಬಿ ವಿಜಯೋತ್ಸವ ವೇಳೆ ಕಾಲ್ತುಳಿತ, ಸರ್ಕಾರದ ಹೊಸ ಜಾತಿ ಗಣತಿ ನಿರ್ಧಾರ, ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಕಲ್ಪಿಸಲು ನಡೆಸಿದ ಸಮೀಕ್ಷೆಯಲ್ಲಿನ ವ್ಯತ್ಯಾಸಗಳು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಕೋಮು ಹತ್ಯೆಗಳು ಸೇರಿದಂತೆ ಹಲವು ವಿಷಯಗಳನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಮುಗಿಬೀಳಲು ವಿಪಕ್ಷಗಳು ರಣತಂತ್ರ ರೂಪಿಸುತ್ತಿವೆ.

ಕರ್ನಾಟಕ ರೋಹಿತ್ ವೇಮುಲಾ ಮಸೂದೆ, ಕರ್ನಾಟಕ ತಪ್ಪು ಮಾಹಿತಿ, ಸುಳ್ಳು ಸುದ್ದಿ ನಿಷೇಧ ಮಸೂದೆ, ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ತಡೆ ಮಸೂದೆ ಸೇರಿದಂತೆ ಹಲವು ಮಸೂದೆಗಳು ಅಧಿವೇಶನದಲ್ಲಿ ಮಂಡನೆಯಾಗುವ ನಿರೀಕ್ಷೆಯಿದೆ.

 

Leave a Reply

Your email address will not be published. Required fields are marked *