
ಬೆಂಗಳೂರು, ಅಕ್ಟೋಬರ್ 30: ರಾಯಚೂರಿನ ಲಿಂಗಸುಗೂರಿನಲ್ಲಿ ನಡೆದ ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಭಾಗವಹಿಸಿದ್ದಕ್ಕಾಗಿ, ಪಿಡಿಓ ಪ್ರವೀಣ್ ಕುಮಾರ್ ಅವರನ್ನು ಅಮಾನತು ಮಾಡಿರುವ ಆದೇಶಕ್ಕೆ ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಸ್‌ಎಟಿ) ಗುರುವಾರ ತಡೆಯಾಜ್ಞೆ ನೀಡಿದೆ.
ಆರೆಸ್ಸೆಸ್ ಶತಮಾನೋತ್ಸವ ಹಿನ್ನಲೆ ಅಕ್ಟೋಬರ್ 12ರಂದು ಲಿಂಗಸುಗೂರು ಪಟ್ಟಣದಲ್ಲಿ ನಡೆದಿದ್ದ ಪಥಸಂಚಲನದಲ್ಲಿ ಸಂಘದ ಸಮವಸ್ತ್ರ ಧರಿಸಿ, ಕೈನಲ್ಲಿ ದೊಣ್ಣೆ ಹಿಡಿದ ಗಣವೇಷಧಾರಿಯಾಗಿ ಲಿಂಗಸುಗೂರು ತಾಲೂಕಿನ ರೋಡಲಬಂಡಾ ಪಿಡಿಓ ಪ್ರವೀಣ್ ಭಾಗವಹಿಸಿದ್ದರು. ಇದರಿಂದಾಗಿ ಪ್ರವೀಣ್, ಕರ್ನಾಟಕ ಸಿವಿಲ್ ಸೇವಾ (ನಡತೆ) ನಿಯಮಗಳು 2021ರ ನಿಯಮ 3ರ ಅನ್ವಯ ಪ್ರತಿಯೊಬ್ಬ ಸರ್ಕಾರಿ ನೌಕರನು ಎಲ್ಲಾ ಕಾಲದಲ್ಲಿಯೂ ಸಂಪೂರ್ಣ ನೀತಿ ನಿಷ್ಠೆಯನ್ನು ಹೊಂದಿರತಕ್ಕದ್ದು ಮತ್ತು ಕರ್ತವ್ಯ ಶ್ರದ್ಧೆಯನ್ನು ಹೊಂದಿರತಕ್ಕದ್ದು ಹಾಗೂ ಸರ್ಕಾರಿ ನೌಕರನಿಗೆ ತಕ್ಕದಲ್ಲದನ್ನು ಮಾಡಬಾರದೆಂಬುದನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ ಅವರನ್ನು ಅಮಾನತು ಮಾಡಿ ಪಂಚಾಯತ್ ರಾಜ್ ಇಲಾಖೆ ಆಯುಕ್ತೆ ಡಾ.ಅರುಂಧತಿ ಚಂದ್ರಶೇಖರ್ ಆದೇಶಿಸಿದ್ದರು.
ರಾಜಕೀಯ ಒತ್ತಡದಿಂದಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರವೀಣ್ ಕುಮಾರ್ ಅವರನ್ನು ಏಕಪಕ್ಷೀಯವಾಗಿ ಅಮಾನತು ಮಾಡಲಾಗಿದೆ ಎಂದು ಆರೋಪಿಸಿ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ಕಚೇರಿಯ ಕಾನೂನು ತಂಡವು ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿಯಲ್ಲಿ ಈ ಕ್ರಮವನ್ನು ಪ್ರಶ್ನಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮಂಡಳಿಯು, ರಾಜ್ಯ ಸರ್ಕಾರದ ಅಮಾನತು ಆದೇಶಕ್ಕೆ ಅಕ್ಟೋಬರ್ 30ರಂದು ತಡೆ ನೀಡಿದೆ.




