

ಮಂಡ್ಯ, ಸೆಪ್ಟೆಂಬರ್ 29: ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಗಣೇಶ ಮೆರವಣಿಗೆಯ ವೇಳೆ ನಡೆದ ಕಲ್ಲು ತೂರಾಟ ಪೂರ್ವ ನಿಯೋಜಿತ ಕೃತ್ಯವಾಗಿತ್ತು ಎಂದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.
ಮದ್ದೂರಿನ ರಾಮ್ ರಹೀಮ್ ನಗರದಲ್ಲಿ ಗಣೇಶ ಮೆರವಣಿಗೆ ವೇಳೆ ಸೆಪ್ಟೆಂಬರ್ 7 ರಂದು ಸಂಜೆ ಮಸೀದಿಯಿಂದ ಕಲ್ಲು ತೂರಾಟ ಮಾಡಲಾಗಿತ್ತು. ಘಟನೆ ಸಂಬಂಧ ಪೊಲೀಸರು ಆರಂಭದಲ್ಲಿ 22 ಮಂದಿ ಆರೋಪಿಗಳನ್ನು ಗುರುತಿಸಿದ್ದರು. ನಂತರ 29 ಮಂದಿಯನ್ನು ವಶಕ್ಕೆ ಪಡೆದಿದ್ದರು. ಇದೀಗ ಆರೋಪಿಗಳ ಸಂಖ್ಯೆ 32ಕ್ಕೆ ಏರಿಕೆಯಾಗಿದೆ. ಸದ್ಯ ಎಲ್ಲ 32 ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.
ಸ್ವಾಮಿ ಎಂಬುವವರ ನೇತೃತ್ವದಲ್ಲಿ ಕೂರಿಸಿದ್ದ ಗಣೇಶ ಮೂರ್ತಿ ಮೇಲೆ ಕಲ್ಲು ತೂರಲು ಪೂರ್ವಯೋಜನೆ ಮಾಡಲಾಗಿತ್ತು ಎಂದು ತನಿಖೆ ವೇಳೆ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.ಆದರೆ ಟಾರ್ಗೆಟ್ ಮಾಡಿದ್ದ ಗಣೇಶ ಮೆರವಣಿಗೆಯ ಬದಲು ಬೇರೆ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.ಘಟನೆ ನಂತರ ಪಟ್ಟಣದಲ್ಲಿ ಉದ್ವಿಗ್ನ ಪರಿಸ್ಥಿತಿ ಸೃಷ್ಟಿಯಾಗಿತ್ತು.
ಆ ಸಂದರ್ಭ ಗೃಹ ಸಚಿವ ಪರಮೇಶ್ವರ್ ಘಟನೆ ಬಗ್ಗೆ ಪ್ರತಿಕ್ರಿಯಿಸಿ, ಮದ್ದೂರು ಕಲ್ಲು ತೂರಾಟ ಪೂರ್ವಯೋಜಿತ ಎಂಬ ಆರೋಪಗಳಿವೆ. ಆ ದೃಷ್ಟಿಕೋನದಿಂದಲೂ ತನಿಖೆ ನಡೆಸಲಾಗುವುದು ಎಂದು ಹೇಳಿದ್ದರು. ಇದೀಗ, ಘಟನೆ ಪೂರ್ವಯೋಜಿತ ಕೃತ್ಯ ಎಂಬುದು ಬಯಲಾಗಿದೆ.


