Share this news

ಬೆಂಗಳೂರು: ರಾಜ್ಯ ಶಿಕ್ಷಣ ನೀತಿ ಆಯೋಗವು (SEP) ಅಂತಿಮ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ. ಶಾಲಾ ಶಿಕ್ಷಣದಲ್ಲಿ 2+8+4 ಸೂತ್ರ, ದ್ವಿಭಾಷಾ ನೀತಿ (ಕನ್ನಡ ಮತ್ತು ಇಂಗ್ಲಿಷ್​) ಸೇರಿದಂತೆ ಹಲವು ಶಿಫಾರಸುಗಳನ್ನು ಮಾಡಿದೆ. ರಾಷ್ಟ್ರೀಯ ಶಿಕ್ಷಣ ನೀತಿ (NEP) 2020ಗೆ ಪರ್ಯಾಯವಾಗಿ ರಾಜ್ಯಕ್ಕೆ ಒಂದು ಶಿಕ್ಷಣ ನೀತಿಯನ್ನು ರೂಪಿಸಲು ರಾಜ್ಯ ಶಿಕ್ಷಣ ಆಯೋಗವನ್ನು ಸರ್ಕಾರ ರಚನೆ ಮಾಡಿತ್ತು. ಪ್ರೊ. ಸುಖದೇವ್​ ಥೋರಾಟ್​ ಅವರ ಅಧ್ಯಕ್ಷತೆಯ ರಾಜ್ಯ ಶಿಕ್ಷಣ ಆಯೋಗ ಅಂತಿಮ ವರದಿ ಸಲ್ಲಿಸಿದೆ.

ಶಾಲಾ ಹಂತದಲ್ಲಿ 2+8+4 ಸೂತ್ರ ಅಳವಡಿಸಲು ಆಯೋಗ ಶಿಫಾರಸು ಮಾಡಿದೆ (2 ವರ್ಷ ಪ್ರಾಥಮಿಕ-ಪೂರ್ವ, 8 ವರ್ಷ ಪ್ರಾಥಮಿಕ, 4 ವರ್ಷ ಮಧ್ಯಮಿಕ ಶಿಕ್ಷಣ). ವಲಸೆ ಹೋಗುವ ಮಕ್ಕಳಿಗಾಗಿ ವಸತಿ ಶಾಲೆಗಳನ್ನ ಸ್ಥಾಪಿಸಿ. ರಾಜ್ಯಾದ್ಯಂತ ಮಾಧ್ಯಮಿಕ ಶಿಕ್ಷಣವನ್ನ ಸಾರ್ವತ್ರೀಕರಣಗೊಳಿಸಿ. ಬಸ್ ಸೌಲಭ್ಯವಿಲ್ಲದ ಮಾರ್ಗಗಳಲ್ಲಿ ಹೊಸ ಶಾಲೆಗಳನ್ನು ಸ್ಥಾಪಿಸಿ. ಎಲ್ಲಾ ಬೋರ್ಡ್ ಶಾಲೆಗಳಲ್ಲಿ 5ನೇ ತರಗತಿವರೆಗೆ ಕನ್ನಡ/ ಮಾತೃಭಾಷೆಯನ್ನು ಬೋಧನಾ ಮಾಧ್ಯಮವಾಗಿ ಕಡ್ಡಾಯಗೊಳಿಸಿ. ದ್ವಿಭಾಷಾ ನೀತಿ ಅನುಷ್ಠಾನಗೊಳಸಿ (ಕನ್ನಡ/ಮಾತೃಭಾಷೆ + ಇಂಗ್ಲಿಷ್) ಎಂಬ ಶಿಫಾರಸುಗಳು ವರದಿಯಲ್ಲಿವೆ.

ವರ್ಷಗಳ ಪೂರ್ವ ಪ್ರಾಥಮಿಕ ಕಾರ್ಯಕ್ರಮಗಳನ್ನು ಪ್ರಾಥಮಿಕ ಶಾಲೆಗಳಲ್ಲಿ ಲಗತ್ತಿಸಿ. ವಿದ್ಯಾರ್ಥಿಗಳ ಸಂಖ್ಯೆಯ ಕೊರತೆಯಿಂದ ಮುಚ್ಚಲ್ಪಟ್ಟ ಪ್ರಾಥಮಿಕ ಶಾಲೆಗಳನ್ನು ಪುನಃ ಆರಂಭಿಸಿ. ಉಚಿತ ಹಾಗೂ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ(RTE) ಅಡಿಯಲ್ಲಿ 4-18 ವರ್ಷ ವಯಸ್ಸಿನವರಿಗೆ ವಿಸ್ತರಿಸುವುದು. ಸರ್ಕಾರಿ ಶಾಲಾ ಗುಣಮಟ್ಟವನ್ನ ಕೇಂದ್ರೀಯ ವಿದ್ಯಾಲಯಗಳಿಗೆ ಅನುಗುಣವಾಗಿ ಹೆಚ್ಚಿಸಿ. ಸರ್ಕಾರಿ ಶಾಲಾ ಅಭಿವೃದ್ಧಿ ಕೇಂದ್ರಗಳನ್ನು ಎಲ್ಲಾ ತಾಲೂಕುಗಳಲ್ಲಿ ಸ್ಥಾಪಿಸಿ. ಶಾಲಾ ಶಿಕ್ಷಣದಲ್ಲಿ ಸಮಗ್ರ, ನಿರಂತರ ಮೌಲ್ಯಮಾಪನ(CCSE) ಅಳವಡಿಸಿ ಎಂದು ಹೇಳಿದೆ.

NCERT ಪಠ್ಯಕ್ರಮದ ಅನುಸರಣೆ ಕೊನೆಗೊಳಿಸಿ, ವಿಷಯಗಳನ್ನ ಸ್ಥಳೀಯಗೊಳಿಸಿ. ಗುತ್ತಿಗೆ ನೇಮಕಾತಿ ನಿಲ್ಲಿಸಿ. ಶಾಲೆಗಳ ದುರಸ್ತಿ ಕಾರ್ಯಗಳನ್ನು ತುರ್ತು ಕ್ರಮವಾಗಿ ಕೈಗೊಳ್ಳಿ. ಸಂಸ್ಕೃತಿ ಮತ್ತು ವೃತ್ತಿಪರ ಮಾದರಿಗಳನ್ನು ಅಳವಡಿಸಲು ನಾಟಕ, ಸಂಗೀತ, ಕ್ರೀಡೆಗಳಂತಹ ಚಟುವಟಿಕೆಗಳನ್ನು ಪ್ರೋತ್ಸಾಹಿಸಿ. ರಾಜ್ಯದ ಒಟ್ಟು ವೆಚ್ಚದಲ್ಲಿ ಶಿಕ್ಷಣದ ಖರ್ಚು ಪ್ರಮಾಣ ಶೇ 30ಕ್ಕೆ ಹೆಚ್ಚಿಸಿ. ಸಾಂವಿಧಾನಿಕ ಮೌಲ್ಯಗಳು ಶಿಕ್ಷಣವನ್ನು ಕಡ್ಡಾಯಗೊಳಿಸಿ ಎಂದು ಶಿಫಾರಸು ಮಾಡಿದೆ.

ವಿಶೇಷವಾಗಿ ಕಡಿಮೆ GER ಜಿಲ್ಲೆಗಳಲ್ಲಿ ಕೂಲಿ ವಲಸೆಯನ್ನು ಕಡಿಮೆ ಮಾಡಲು ಸ್ಟೈಫೆಂಡ್ (MGNREGA ದರದ ಅರ್ಧದಷ್ಟು) ನೀಡಬೇಕು. ಎಲ್ಲಾ ಕಡಿಮೆ ಆದಾಯದ ಮುಸ್ಲಿಂ ವಿದ್ಯಾರ್ಥಿಗಳಿಗೆ ಸಂಪೂರ್ಣ ಆರ್ಥಿಕ ಬೆಂಬಲ, ಕಡಿಮೆ ಪೋಷಕರ ಶಿಕ್ಷಣ ಹೊಂದಿರುವ ಮನೆಗಳಿಗೆ ಬೆಂಬಲ, ಗ್ರಾಮೀಣ ಮುಸ್ಲಿಂ ಹೆಣ್ಣುಮಕ್ಕಳ ದಾಖಲಾತಿಯನ್ನು ಹೆಚ್ಚಿಸಲು ಪ್ರೋತ್ಸಾಹ ಮತ್ತು ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ವಿವಾಹವನ್ನು ತಡಮಾಡಲು ಪ್ರೋತ್ಸಾಹಗಳು.ಉದ್ಯೋಗ-ಸಂಬಂಧಿತ ಸಾಲ ಮರುಪಾವತಿ ವ್ಯವಸ್ಥೆಯೊಂದಿಗೆ ಶಿಕ್ಷಣಕ್ಕಾಗಿ ಸಾರ್ವಜನಿಕ-ಖಾಸಗಿ ನಿಧಿ ಪಾಲುದಾರಿಕೆ ಬೆಂಬಲದ ಅಡಿಯಲ್ಲಿ ಕರ್ನಾಟಕ ರಾಜ್ಯ ಶಿಕ್ಷಣ ಹಣಕಾಸು ನಿಗಮವನ್ನು (KSEFC) ಸ್ಥಾಪಿಸಬೇಕು. ಮೆರಿಟ್​ ಆಧಾರದ ಮೇಲೆ ಖಾಸಗಿ ಅನುದಾನರಹಿತ ಸಂಸ್ಥೆಗಳಿಗೆ ಪ್ರವೇಶ ಪಡೆಯುವ ಎಲ್ಲಾ ಕಡಿಮೆ ಆದಾಯದ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ಗಳನ್ನು ಒದಗಿಸವುದು.

ಸಂವಿಧಾನದ ಅನುಚ್ಛೇದ 15(5) ರ ಪ್ರಕಾರ ಖಾಸಗಿ ಅನುದಾನರಹಿತ ವಿಶ್ವವಿದ್ಯಾಲಯಗಳು, ಡೀಮ್ಸ್ ವಿಶ್ವವಿದ್ಯಾಲಯಗಳು, ಕಾಲೇಜುಗಳು ಮತ್ತು ಸ್ವತಂತ್ರ ಸಂಸ್ಥೆಗಳಲ್ಲಿ SC/ST/OBC ಮೀಸಲಾತಿಯನ್ನು ಒದಗಿಸಲು ನಿಯಮಗಳನ್ನು ಜಾರಿಗೆ ತರಬೇಕು. ಖಾಸಗಿ ಅನುದಾನರಹಿತ ಕಾಲೇಜುಗಳಲ್ಲಿ ಮೂಲಸೌಕರ್ಯ, ಪ್ರವೇಶ, ಮೀಸಲಾತಿ, ಬೋಧನಾ ಗುಣಮಟ್ಟ, ಅಧ್ಯಾಪಕರ ಸಮಸ್ಯೆಗಳು, ಹೊಣೆಗಾರಿಕೆ ಮತ್ತು ಕುಂದುಕೊರತೆಗಳನ್ನು ಮೇಲ್ವಿಚಾರಣೆ ಮಾಡಲು ಕಾಲೇಜು ಶಿಕ್ಷಣ ಆಯುಕ್ತರ ಅಡಿಯಲ್ಲಿ ಪ್ರತ್ಯೇಕ ನಿರ್ದೇಶನಾಲಯವನ್ನು ರಚಿಸಬೇಕು.

ಪ್ರಾದೇಶಿಕ ಜಂಟಿ ನಿರ್ದೇಶಕರ ಕಚೇರಿಗಳನ್ನು 6ರಿಂದ 4ಕ್ಕೆ ಇಳಿಸಿ, ಹೊಸ ಜಿಲ್ಲಾ ಮಟ್ಟದ ಕಚೇರಿಗಳನ್ನು ಶಿಕ್ಷಣ ತಜ್ಞರ ನೇತೃತ್ವದಲ್ಲಿ ಇರಿಸುವ ಮೂಲಕ ಆಡಳಿತವನ್ನು ಪುನರಚಿಸಬೇಕು. ಪ್ರತಿ ವಿಶ್ವವಿದ್ಯಾಲಯದಲ್ಲಿ ವಿದೇಶಿ ವಿದ್ಯಾರ್ಥಿಗಳ ಕೋಶವನ್ನು ಸ್ಥಾಪಿಸಬೇಕು. ಶಿಕ್ಷಣದ ಎಲ್ಲಾ ವಿಭಾಗಗಳಲ್ಲಿ ಉದ್ಯೋಗ ಆಧಾರಿತ ವೃತ್ತಿಪರ ಕೋರ್ಸ್‌ಗಳನ್ನು ಹೆಚ್ಚಿಸಬೇಕು.ವಿವಿಧ ವೃತ್ತಿಪರ ವಿಭಾಗಗಳಲ್ಲಿ, ವಿಶೇಷವಾಗಿ ಗ್ರಾಮೀಣ ಮತ್ತು ಕೃಷಿ ಸಂಬಂಧಿತ ಕೋರ್ಸ್‌ಗಳಲ್ಲಿ ಅಲ್ಪಾವಧಿಯ ಡಿಪ್ಲೊಮಾ ಮತ್ತು ಪ್ರಮಾಣಪತ್ರ ಕೋರ್ಸ್‌ಗಳನ್ನು ಪ್ರೋತ್ಸಾಹಿಸಬೇಕು. ಸಾಮಾನ್ಯ ಪದವಿ ಕೋರ್ಸ್‌ಗಳು ಮತ್ತು ವೃತ್ತಿಪರ ಕೋರ್ಸ್‌ಗಳಲ್ಲಿ ದಾಖಲಾದ ವಿದ್ಯಾರ್ಥಿಗಳಿಗೆ ಸರ್ಕಾರವು ಪಾವತಿಸಿದ ಇಂಟರ್ನ್‌ ಶಿಪ್ ಸೌಲಭ್ಯಗಳನ್ನು ಪ್ರಾರಂಭಿಸಬೇಕು. ಕರ್ನಾಟಕದ ಪ್ರತಿ ವಿಭಾಗದಲ್ಲಿ ಸ್ಥಳೀಯ ಉದ್ಯಮದ ಮುಖಂಡರ ನೇತೃತ್ವದಲ್ಲಿ ವಿಭಾಗ-ನಿರ್ದಿಷ್ಟ ಕೌಶಲ್ಯ ಮಂಡಳಿಗಳನ್ನು ಸ್ಥಾಪಿಸಬೇಕು.ಉದ್ಯಮಶೀಲತೆ ಮತ್ತು ಆವಿಷ್ಕಾರ ಕೇಂದ್ರಿತ ವಿಧಾನವನ್ನು ಪೋಷಿಸಬೇಕು. ಸುಸ್ಥಿರ ಮತ್ತು ಹಸಿರು ಕೌಶಲ್ಯಗಳ ಅಭಿವೃದ್ಧಿಗೆ ಅದ್ಯತೆ ನೀಡಬೇಕು. ಉದ್ಯಮ-ಶೈಕ್ಷಣಿಕ ಸಹಯೋಗವನ್ನು ಪ್ರಮುಖ ನೀತಿಯ ಆಧಾರಸ್ತಂಭವಾಗಿ ಸಂಯೋಜಿಸಬೇಕು. ತಂತ್ರಜ್ಞಾನ-ವರ್ಧಿತ ಕಲಿಕೆ ಮತ್ತು ಡಿಜಿಟಲ್ ಸಾಕ್ಷರತೆಗೆ ಆದ್ಯತೆ ನೀಡಬೇಕು. ಇಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ಶಿಕ್ಷಣ ಪಠ್ಯಕ್ರಮವು ರಾಷ್ಟ್ರೀಯ/ರಾಜ್ಯ ಗುರಿಗಳಿಗೆ ಅನುಗುಣವಾಗಿರಬೇಕು.ಇಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ಶಿಕ್ಷಣದಲ್ಲಿ ಕ್ವಾಂಟಮ್ ಕಂಪ್ಯೂಟಿಂಗ್, AI, ML, DS, ಜೀವ ವಿಜ್ಞಾನ ಮತ್ತು ನ್ಯಾನೋ ವಿಜ್ಞಾನದಂತಹ ಟ್ರೆಂಡಿಂಗ್ ತಂತ್ರಜ್ಞಾನಗಳನ್ನು ಹೆಚ್ಚಿಸಬೇಕು. ಕೃಷಿಯಲ್ಲಿ ತಂತ್ರಜ್ಞಾನದ ಏಕೀಕರಣದೊಂದಿಗೆ ಹೊಸ ಕೋರ್ಸ್‌ಗಳನ್ನು ಪರಿಚಯಿಸುವುದು. ಕೃಷಿ ವಿಶ್ವವಿದ್ಯಾಲಯಗಳಿಂದ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಆಹಾರ ಸಂಸ್ಮರಣೆ ಮತ್ತು ನಿಖರ ಕೃಷಿಯಲ್ಲಿ ಡಿಪ್ಲೊಮಾವನ್ನು ಪ್ರೋತ್ಸಾಹಿಸಬೇಕು.ಕೃಷಿ ವಿಶ್ವವಿದ್ಯಾಲಯಗಳಲ್ಲಿನ ಪದವಿಪೂರ್ವ ಅಧ್ಯಯನದ ಭಾಗವಾಗಿ ಸಾಂವಿಧಾನಿಕ ಮೌಲ್ಯ ಶಿಕ್ಷಣ ಇರಬೇಕು. ಶಾಲಾ ಮತ್ತು ಪದವಿಪೂರ್ವ ಶಿಕ್ಷಣದಿಂದಲೇ ಕೃಷಿ/ಕೃಷಿ ಅಧ್ಯಯನವನ್ನು ಪರಿಚಯಿಸುವುದು. ಖಾಸಗಿ ಕೃಷಿ ವಿಶ್ವವಿದ್ಯಾಲಯಗಳ ಸ್ಥಾಪನೆಯನ್ನು ನಿರ್ಬಂಧಿಸಿ. ಸಾರ್ವಜನಿಕ ವಿಶ್ವವಿದ್ಯಾಲಯಗಳಲ್ಲಿ NRI ಪ್ರವೇಶವನ್ನು (ಶೇ,10ಕ್ಕೆ ಹೆಚ್ಚಿಸಲಾಗಿದೆ) ಮುಂದುವರೆಸಬೇಕು. ಕೃಷಿ ಕ್ಷೇತ್ರದಲ್ಲಿ ಡ್ಯುಯಲ್/ಜಂಟಿ ಪದವಿಗಳು, ವಿನಿಮಯ ಕಾರ್ಯಕ್ರಮಗಳು ಮತ್ತು ಅಂತರಾಷ್ಟ್ರೀಯ ಇಂಟರ್ನ್‌ ಶಿಪ್‌ಗಳನ್ನು ಉತ್ತೇಜಿಸಿ ಮತ್ತು PPP ಮಾದರಿಯಲ್ಲಿ ವಿದೇಶಿ ಸಂಸ್ಥೆಗಳು ಅಥವಾ ಕ್ಯಾಂಪಸ್‌ಗಳಿಗೆ ಅವಕಾಶ ನೀಡಬೇಕು. ಕೃಷಿ ಸಂದರ್ಭಕ್ಕಾಗಿ ಕನ್ನಡ ಭಾಷೆಯ ಪಠ್ಯಪುಸ್ತಕಗಳ ಅಭಿವೃದ್ಧಿಪಡಿಸಬೇಕು ಎಂದು ಶಿಫಾರಸು ಮಾಡಿದೆ.

 

 

 

 

 

 

  

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

  

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *