ಬೆಂಗಳೂರು: ಬಡಗುತಿಟ್ಟಿನ ಖ್ಯಾತ ಭಾಗವತರು ಯಕ್ಷರಂಗ ಮಾಂತ್ರಿಕ ಸುಬ್ರಹ್ಮಣ್ಯ ಧಾರೇಶ್ವರ (67) ಗುರುವಾರ ಮುಂಜಾನೆ ಬೆಂಗಳೂರಿನ ತನ್ನ ಪುತ್ರನ ಮನೆಯಲ್ಲಿ ನಿಧನರಾಗಿದ್ದಾರೆ.
ನಿರಂತರ 46 ವರ್ಷಗಳ ಕಾಲ ಯಕ್ಷ ರಂಗದಲ್ಲಿ ಸೇವೆ ಸಲ್ಲಿಸಿದ ಧಾರೇಶ್ವರರು ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದರು.
ಯಕ್ಷ ರಂಗದಲ್ಲಿ ಸಮಧುರ ಸ್ವರದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದರು.ಅವರ 46 ವರ್ಷಗಳ ಯಕ್ಷ ರಂಗದ ಸೇವೆಯಲ್ಲಿ ಬರೋಬ್ಬರಿ 28 ವರ್ಷಗಳ ಕಾಲ ಪೆರ್ಡೂರು ಮೇಳದಲ್ಲಿ ಪ್ರಧಾನ ಭಾಗವರಾಗಿ ಸೇವೆ ಸಲ್ಲಿಸಿದ್ದಾರೆ.
ದಿ.ಚಿಟ್ಟಾಣಿ ರಾಮಚಂದ್ರ ಹೆಗಡೆ, ಗೋಡೆ ನಾರಾಯಣ ಹೆಗಡೆ,ಕೃಷ್ಣಯಾಜಿ ಬಳ್ಕೂರು, ಕೊಂಡದಕುಳಿ ರಾಮಚಂದ್ರ ಹೆಗಡೆ,ತೀರ್ಥಹಳ್ಳಿ ಗೋಪಾಲ ಆಚಾರ್ಯ ಸೇರಿದಂತೆ ದಿಗ್ಗಜ ಕಲಾವಿದರು ಧಾರೇಶ್ವರರ ತಾಳಕ್ಕೆ ಹೆಜ್ಜೆ ಹಾಕಿದ್ದಾರೆ.
ಸುಬ್ರಹ್ಮಣ್ಯ ಧಾರೇಶ್ವರರ ನಿಧನದಿಂದ ಇಡೀ ಬಡಗುತಿಟ್ಟು ಯಕ್ಷರಂಗವು ಅಮೂಲ್ಯ ರತ್ನವನ್ನು ಕಳೆದುಕೊಂಡಿದೆ.