
ಕಾರ್ಕಳ, ಏ. 02: ಪುತ್ತೂರು ತಾಲೂಕಿನ ನೆಲ್ಯಾಡಿ ಗ್ರಾಮದ ನಿವಾಸಿಯಾಗಿದ್ದ ಉದ್ಯಮಿ ಸುದೀಪ್ ರೈ ಅನುಮಾನಾಸ್ಪದ ಸಾವಿನ ಕುರಿತು ಆತನ ಪತ್ನಿ ಕಾರ್ಕಳದ ನಿವಾಸಿ ಸೌಮ್ಯ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದು,ಆತನ ಸಾವಿಗೆ ಅವನ ಮನೆಯವರೇ ಕಾರಣ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಸುದೀಪ್ ರೈ ಕಾರ್ಕಳದ ಬಂಗ್ಲೆಗುಡ್ಡೆ ಕಜೆ ನಿವಾಸಿ ಸೌಮ್ಯ ಶೆಟ್ಟಿಯನ್ನು ವಿವಾಹವಾದ ಕೇವಲ ಒಂದೇ ತಿಂಗಳಲ್ಲಿ ಆತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ ಎನ್ನಲಾದ ಪ್ರಕರಣಕ್ಕೆ ಇದೀಗ ಮತ್ತೆ ತಿರುವು ಸಿಕ್ಕಿದೆ. ಕಾರ್ಕಳದಲ್ಲಿ ಆತ ತೀವ್ರವಾಗಿ ಅಸ್ವಸ್ಥನಾಗಿ ಬಳಿಕ ಉಡುಪಿ ಖಾಸಗಿ ಆಸ್ಪತ್ರೆ ಹಾಗೂ ಕೊನೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದ. ನಮ್ಮ ಮಗನ ಸಾವಿಗೆ ಆತನ ಪತ್ನಿ ಸೌಮ್ಯಾ ಶೆಟ್ಟಿಯೇ ಕಾರಣ ಎಂಬ ಗಂಭೀರ ಆರೋಪವನ್ನು ಸುದೀಪ್ ಪೋಷಕರು ಮಾಡಿದ್ದರು.ಇದೀಗ ತನ್ನ ಮೇಲಿನ ಆರೋಪಗಳಿಗೆ ಸ್ವತಃ ಸೌಮ್ಯ ಶೆಟ್ಟಿಯೇ ಪ್ರತಿಕ್ರಿಯೆ ನೀಡಿದ್ದು, ಸುದೀಪ್ ರೈ ಹೆತ್ತವರ ಆರೋಪ ಸುಳ್ಳು, ಪತಿಯ ಸಾವಿಗೆ ಅವನ ಮನೆಯವರೇ ಕಾರಣ ಎಂದಿದ್ದಾಳೆ.
ಸುದೀಪ್ ಪೋಷಕರು ಹೇಳುವಂತೆ ನೆಲ್ಯಾಡಿಯಲ್ಲಿ ನಾನು ರಂಪಾಟ ಮಾಡಿಲ್ಲ. ವಿಷ ಹಾಕಿ ಸುದೀಪ್ರನ್ನು ಕೊಂದಿಲ್ಲ. ಬದಲಾಗಿ ಮನೆಯವರ ಕಿರುಕುಳದಿಂದಲೇ ಸುದೀಪ್ ಆತ್ಮಹತ್ಯೆ ಮಾಡಿಕೊಂಡಿರಬಹುದು. ಸುದೀಪ್ ಮೊಬೈಲ್ ಸಂಪರ್ಕಕ್ಕೆ ಸಿಗದ ಕಾರಣ ಆತಂಕಗೊಂಡು ತಾನು ನೆಲ್ಯಾಡಿಗೆ ತೆರಳಿದ್ದೆ. ಅವರು ಹೇಳುವಂತೆ ತಾನು ಯಾವುದೇ ರಂಪಾಟ ನಡೆಸಿಲ್ಲ. ಬೇಕಿದ್ದರೆ ಸಿಸಿ ಕ್ಯಾಮರಾ ದೃಶ್ಯಾವಳಿಗಳ ಪರಿಶೀಲನೆ ಮಾಡಬಹುದು. ಸುದೀಪ್ ತಾಯಿ ನನಗೆ ಕೆಟ್ಟ ಭಾಷೆಯಲ್ಲಿ ಬೈದ ಕಾರಣದಿಂದ ನಾನು ಕಿರುಚಾಡಿದ್ದು ನಿಜ ಎಂದು ಸೌಮ್ಯ ಶೆಟ್ಟಿ ಹೇಳಿಕೆ ನೀಡಿದ್ದಾಳೆ. ನಮ್ಮ ಮನೆಯಲ್ಲಿಯೇ ಇದ್ದ ಸುದೀಪ್ ಮಾರ್ಚ್ 16ರಂದು ನೆಲ್ಯಾಡಿಗೆ ತೆರಳಿದ್ದರು. ತಂದೆಯ ಮನೆಗೆ ಹೋದ ಬಳಿಕ ನನ್ನ ಮನೆಯಲ್ಲಿ ಮದುವೆಗೆ ಒಪ್ಪಿಗೆ ಇಲ್ಲ ಎಂದಿದ್ದರು.ಒಂದು ವೇಳೆ ಅವರು ಒಪ್ಪದಿದ್ದರೆ ನಿಮ್ಮ ಮನೆಯಲ್ಲಿ ಒಪ್ಪುತ್ತಾರಲ್ಲ ಎಂದು ಕೇಳಿದ್ದರು. ತಂದೆಯ ಮನೆಗೆ ಹೋಗಿ ಬಂದ ನಂತರ ಆತ್ಮಹತ್ಯೆ ನಿರ್ಧಾರ ಮಾಡಿದ್ದಾರೆ. ಹೀಗಾಗಿ ಅವರ ಮನೆಯವರೇ ಆತ್ಮಹತ್ಯೆಗೆ ಪ್ರಚೋದನೆ ನೀಡಿರಬೇಕು ಎಂದು ಸೌಮ್ಯಾ ಆರೋಪಿಸಿದ್ದಾರೆ.
ಮಾಜಿ ಗೆಳೆಯ ವೇಣು ಶೆಟ್ಟಿ ಆರೋಪಗಳಿಗೂ ಉತ್ತರಿಸಿರುವ ಸೌಮ್ಯಾ, ನಾವಿಬ್ಬರೂ ರಂಗಭೂಮಿ ಕಲಾವಿದರು. ನನಗೆ ಆತನ ಪರಿಚಯ ಇರಲಿಲ್ಲ. ಆದರೆ ಅವನಿಗೆ ನನ್ನ ಪರಿಚಯ ಇತ್ತಂತೆ. ಈ ಹಿಂದೆ ನನಗೆ ಪ್ರಪೋಸಲ್ ಬಂದಿತ್ತು. ಆ ವೇಳೆ ನನಗೆ ಅನೇಕ ಮಂದಿ ಆತನ ಬಗ್ಗೆ ಮಾಹಿತಿ ನೀಡಿದ್ದು, ಹಲವು ಮಹಿಳೆಯರ ಜೊತೆ ಅವನಿಗೆ ಸಂಬಂಧ ಇತ್ತು ಎಂಬುದು ಗೊತ್ತಾಗಿತ್ತು. ಹೀಗಾಗಿ ಆ ಸಂಬಂಧ ಬಿಟ್ಟಿದ್ದೆ. ನಮ್ಮ ಮನೆಗೂ ಆತ ಬಂದು ಹೋಗುತ್ತಿದ್ದ. ನಂತರ ಮನೆಗೆ ಬರಬೇಡ ಎಂದಿದ್ದೆವು. ಆತನೇ ಸುದೀಪ್ ಮನೆಯವರ ತಲೆ ಕೆಡಿಸಿದ್ದು, ಈ ಬಗ್ಗೆ ಪತಿಯೇ ತನಗೆ ತಿಳಿಸಿದ್ದರು. ಸುದೀಪ್ ತಂದೆಗೆ ವೇಣುಗೋಪಾಲ್ ಕಡೆಯಿಂದ ಅನೇಕ ಬಾರಿ ಕರೆ ಹೋಗಿದೆ. ಹೀಗಾಗಿ ಆತ ಕೂಡ ತನ್ನ ಪತಿಯ ಆತ್ಮಹತ್ಯೆಗೆ ಕಾರಣ. ಹೀಗಾಗಿ ತನ್ನ ಮೇಲೆ ಸುಳ್ಳು ಆರೋಪ ಮಾಡಿದವರ ವಿರುದ್ಧ ದೂರು ನೀಡಿದ್ದೇನೆ. ಕಾರ್ಕಳ ಠಾಣೆಯಲ್ಲಿ ಸುದೀಪ್ ಮನೆಯವರು ಹಾಗೂ ವೇಣುಶೆಟ್ಟಿ ವಿರುದ್ಧ ದೂರು ದಾಖಲಿಸಿದ್ದೇನೆ ಎಂದು ಸೌಮ್ಯ ಶೆಟ್ಟಿ ತಿಳಿಸಿದ್ದಾರೆ.















.
.
.
.
.
.
.
.
.
.
