
ಕಾರ್ಕಳ, ಜ.31: ಗ್ರಾಮೀಣ ಪ್ರದೇಶಗಳಲ್ಲಿ ಉದ್ಯಮಗಳು ಬೆಳದಾಗ ಉದ್ಯೋಗ ಸೃಷ್ಟಿಯ ಜೊತೆಗೆ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ಸಿಗುತ್ತದೆ ಎಂದು ಮುಂಬಯಿ ಉದ್ಯಮಿ ಅಜೆಕಾರಿನ ದೇವಸ್ಯ ಶಿವರಾಮ ಶೆಟ್ಟಿ ಅಭಿಪ್ರಾಯಪಟ್ಟರು.
ಅವರು ಮುನಿಯಾಲಿನ ಕಾಡುಹೊಳೆ ಎಂಬಲ್ಲಿ ನೂತನವಾಗಿ ನಿರ್ಮಾಣವಾದ ಸುಧಣ್ಣಾಸ್ ರಿವರ್ ವ್ಯೂ ಗಾರ್ಡನ್ ಎಂಬ ಓಪನ್ ಸಭಾಂಗಣವನ್ನು ಉದ್ಘಾಟಿಸಿ ಮಾತನಾಡಿದರು. ಹಸಿರ ಪ್ರಕೃತಿಯ ಸೊಬಗಿನ ನಡುವಿನ ನದಿಯ ತಟದಲ್ಲಿನ ಈ ಸಭಾಂಗಣವು ಉಡುಪಿ ಜಿಲ್ಲೆಯಂತಹ ಗ್ರಾಮೀಣ ಭಾಗದಲ್ಲಿ ಇದೊಂದು ವಿನೂತನ ಕಲ್ಪನೆಯಾಗಿದೆ. ಕಾರ್ಕಳ-ಹೆಬ್ರಿ ಪರಿಸರದ ಎಲ್ಲಾ ಶುಭ ಸಮಾರಂಭಗಳು ಇಲ್ಲಿ ನಡೆಯವಂತಾಗಲಿ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಅಜೆಕಾರು ಚರ್ಚಿನ ಧರ್ಮಗುರು ಹೆನ್ರಿ ಮಸ್ಕರೇನ್ಹಸ್ ಮಾತನಾಡಿ, ನೂತನ ಸುಧಣ್ಣಾಸ್ ರಿವರ್ ವ್ಯೂ ಗಾರ್ಡನ್ ಕುಟುಂಬ ಸದಸ್ಯರು ಒಂದೇ ಕಡೆ ಸೇರಿ ಸಂತೋಷವನ್ನು ಹಂಚಿಕೊಳ್ಳುವ ಕೇಂದ್ರವಾಗಲಿ ಇದರ ಜೊತೆಗೆ ಈ ಸಂಸ್ಥೆ ಸಮೃದ್ಧಿಯತ್ತ ಸಾಗಲಿ ಎಂದು ಶುಭ ಹಾರೈಸಿದರು.
ಅಜೆಕಾರು ಪದ್ಮಗೋಪಾಲ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷರಾದ ಡಾ.ಸುಧಾಕರ ಶೆಟ್ಟಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಊರಿನ ಅಭಿವೃದ್ಧಿಯಲ್ಲಿ ಉದ್ಯಮಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಯಶಸ್ಸು ಎನ್ನುವುದು ಹೂವಿನ ಹಾಸಿಗೆಯಲ್ಲ ಅದು ಕಠಿಣ ಪರಿಶ್ರಮ ಹಾಗೂ ಬೆವರಿನ ಪ್ರತಿಫಲ.ಈ ನಿಟ್ಟಿನಲ್ಲಿ ಸುಜಯ ಶೆಟ್ಟಿಯವರ ಅವಿರತ ಶ್ರಮವೂ ಅಡಗಿದೆ. ಜೀವನದಲ್ಲಿ ಯಶಸ್ಸು ಸಿಗಬೇಕಾದರೆ ತನ್ನಹುಟ್ಟಿದ ಊರು ತಂದೆ ತಾಯಿಗಳನ್ನು ಎಂದಿಗೂ ಮರೆಯಬಾರದು. ಈ ನಿಟ್ಟಿನಲ್ಲಿ ಸುಜಯ ಶೆಟ್ಟಿಯವರು ದೂರದ ಹುಬ್ಬಳ್ಳಿ-ಧಾರವಾಡದಲ್ಲಿ ಉದ್ಯಮ ಕಟ್ಟಿ ಬೆಳೆಸಿದರೂ ಹುಟ್ಟೂರನ್ನು ಮರೆತಿಲ್ಲ. ಗ್ರಾಮೀಣ ಭಾಗದಲ್ಲಿ ಕಠಿಣ ಸವಾಲುಗಳನ್ನು ಎದುರಿಸಿ ಸುಜಯ ಶೆಟ್ಟಿಯವರು ಉದ್ಯಮಗಳಲ್ಲಿ ಯಶಸ್ಸು ಸಾಧಿಸಿರುವುದು ಅವರ ಬದ್ಧತೆಗೆ ಸಾಕ್ಷಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಮುನಿಯಾಲು ಆಯುರ್ವೇದ ಕಾಲೇಜು ಮಣಿಪಾಲ ಅಧ್ಯಕ್ಷ ವಿಜಯಭಾನು ಶೆಟ್ಟಿ , ಉದ್ಯಮಿ ದಿನೇಶ್ ಪೈ ಮುನಿಯಾಲು, ಉದಯ ಕೃಷ್ಣಯ್ಯ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಮುನಿಯಾಲು ಉದಯ ಶೆಟ್ಟಿ, ಮುಂಬೈ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿರ್ದೇಶಕ ಹರೀಶ್ ಶೆಟಿ,್ಟ ಬೈರಂಪಳ್ಳಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಿಯಾನಂದ ಹೆಗ್ಡೆ, ವರಂಗ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಅಮೀನ್, ಕಟಪಾಡಿ ಪ್ರಜ್ವಲ್ ಕನ್ಸ್ಟ್ರಕ್ಷನ್ನ ಮಾಲೀಕರಾದ ದಯಾನಂದ ಶೆಟ್ಟಿ, ಮಂಗಳೂರು ಇಂಡಸ್ಟ್ರಿಯಲ್ ಸೊಲ್ಯೂಷನ್ನ ಮಾಲೀಕರಾದ ಯತ್ನೀಶ್ ಶೆಟ್ಟಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಖ್ಯಾತ ಪಾಕ ತಜ್ಞ ಕುಂದಾಪುರದ ಬಿಲ್ಲಾಡಿಯ ಶೀನ ಕುಲಾಲ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಂಸ್ಥೆಯ ಪಾಲುದಾರರಾದ ಗುರುಪ್ರಸಾದ್ ಶೆಟ್ಟಿ ಸ್ವಾಗತಿಸಿ, ಪ್ರವರ್ತಕರಾದ ಸುಜಯ ಶೆಟ್ಟಿ ವಂದಿಸಿದರು.ಹರೀಶ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.



.
.
.
.
