ಮಂಡ್ಯ:ಮಂಡ್ಯದ ಸೊಸೆಯಾಗಿ ಮಂಡ್ಯದ ಮಣ್ಣು ಹಾಗೂ ಜನರ ಋಣ ತೀರಿಸುವ ಮಹತ್ತರ ಜವಾಬ್ದಾರಿ ನನ್ನ ಮೇಲಿದ್ದು, ಈ ಬಾರಿಯ ಲೋಕಸಭೆಗೆ ಮಂಡ್ಯದಿಂದಲೇ ನನ್ನ ಸ್ಪರ್ಧೆ ನಿಶ್ಚಿತ ಎಂದು ಸಂಸದೆ ಸುಮಲತಾ ಅಂಬರೀಶ್ ಘೋಷಣೆ ಮಾಡಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಸಮಲತಾ, ಕಳೆದ 5 ವರ್ಷಗಳಲ್ಲಿ ಮಂಡ್ಯ ಹಲವು ಆಯಾಮಗಳಲ್ಲಿ ಅಭಿವೃದ್ಧಿಯಾಗಿದೆ.ಮಂಡ್ಯದಲ್ಲಿ ಭಾರೀ ಸದ್ದುಮಾಡಿದ್ದ ಭ್ರೂಣ ಹತ್ಯೆ ಬಗ್ಗೆ ನಾನು 4 ವರ್ಷಗಳ ಹಿಂದೆಯೆ ಪ್ರಸ್ತಾಪ ಮಾಡಿದ್ದೆ, ಆದರೆ ಅದರ ವಿರುದ್ಧ ಸರಿಯಾದ ತನಿಖೆಯಾಗಲಿಲ್ಲ, ಭ್ರೂಣ ಹತ್ಯೆ ತಡೆಯಲು ಜಿಲ್ಲಾಡಳಿತ ವಿಫಲವಾಗಿದ್ದು ಬೇಸರ ತಂದಿದೆ ಎಂದರು.
ಇತ್ತ ಸುಮಲತಾ ತಾನು ಮಂಡ್ಯದಿಂದಲೇ ನನ್ನ ಸ್ಪರ್ಧೆ ಎಂದು ಘೋಷಣೆ ಮಾಡಿರುವ ಬೆನ್ನಲ್ಲೇ ಜೆಡಿಎಸ್ ಹಾಗೂ ಬಿಜೆಪಿಗೆ ಅಭ್ಯರ್ಥಿ ಅಂತಿಮಗೊಳಿಸುವ ಕಸರತ್ತು ಇನ್ನಷ್ಟು ಕಗ್ಗಂಟಾಗಲಿದೆಯೇ ಎನ್ನುವ ಪ್ರಶ್ನೆ ಮೂಡಿದೆ. ಮಂಡ್ಯದಿಂದಲೇ ನನ್ನ ಸ್ಪರ್ಧೆ ಎನ್ನುವ ಮೂಲಕ ಸುಮಲತಾ ರಣಕಹಳೆ ಊದಿದ್ದು, ಇತ್ತ ಕಾಂಗ್ರೆಸ್ ಕೂಡ ಅಲರ್ಟ್ ಆಗಿದೆ. ಕಳೆದ ವಾರ ಮಂಡ್ಯದ ಸಮಾವೇಶದಲ್ಲಿ ಮಾತನಾಡಿದ ಸಿಎಂ ಈ ಬಾರಿಯ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರವನ್ನು ಗೆಲ್ಲಲೇಬೇಕೆಂಬ ಶಪಥ ಮಾಡಿದ್ದು, ಒಟ್ಟಿನಲ್ಲಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ರಣಕಣ ಭಾರೀ ಜಿದ್ದಾಜಿದ್ದಿಗೆ ವೇದಿಕೆಯಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.