ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ತಡೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಏಪ್ರಿಲ್ 9ಕ್ಕೆ ಮುಂದೂಡಿದ್ದು ಅಲ್ಲಿಯವರೆಗೆ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ತಡೆಹಿಡಿಯುವ ಯಾವುದೇ ಮಧ್ಯಂತರ ಆದೇಶವನ್ನು ಹೊರಡಿಸಲು ಸುಪ್ರೀಂ ನ್ಯಾಯಪೀಠ ನಿರಾಕರಿಸಿದೆ. ಪೌರತ್ವ ತಿದ್ದುಪಡಿ ಕಾಯ್ದೆಯ ಸಾಧಕಬಾಧಕಗಳ ಕುರಿತು 3 ವಾರದೊಳಗೆ ಪ್ರತಿಕ್ರಿಯೆ ನೀಡುವಂತೆ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿ ಜೆ.ಬಿ.ಪರ್ಡಿವಾಲಾ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರ ನ್ಯಾಯಪೀಠವು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿ, ವಿಚಾರಣೆಯನ್ನು ಮುಂದೂಡಿದೆ.
ಮುAದಿನ ಸರ್ಕಾರ ರಚನೆಯಾಗುವವರೆಗೆ ಪೌರತ್ವ ನೀಡುವುದನ್ನು ತಡೆಹಿಡಿಯಬೇಕೆಂದು ಕೋರಿ ಮನವಿ ಸಲ್ಲಿಸಲಾಗಿದೆ, ಆದರೆ ನ್ಯಾಯಾಲಯವು ಈ ಮನವಿಯನ್ನು ತಿರಸ್ಕರಿಸಿದೆ. ಎನ್‌ಆರ್‌ಸಿ ವಿಷಯವನ್ನು ಸಿಎಎಯೊಂದಿಗೆ ಬೆರೆಸುವ ಪ್ರಯತ್ನಗಳು ನಡೆಯುತ್ತಿವೆ ಮತ್ತು ಈ ಪೈಕಿ ಎನ್‌ಆರ್‌ಸಿ ನ್ಯಾಯಾಲಯದ ಮುಂದಿರುವ ವಿಷಯವಲ್ಲ ಎಂದು ಸಾಲಿಸಿಟರ್ ಜನರಲ್ ನ್ಯಾಯಾಲಯಕ್ಕೆ ತಿಳಿಸಿದರು. ಪ್ರಸ್ತುತ ಸಿಎಎ ಕಾನೂನು ಕೇವಲ ಪೌರತ್ವವನ್ನು ನೀಡಲು ಮಾತ್ರ ಅನುಮತಿಸುತ್ತದೆ ಹೊರತು ಪೌರತ್ವವನ್ನು ಕಸಿಯುವ ಕಾನೂನು ಅಲ್ಲ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು.