ನವದೆಹಲಿ: ಕೇರಳದ ಕಾಸರಗೋಡಿನಲ್ಲಿ ನಡೆದ ಅಣಕು ಮತದಾನದ ಸಂದರ್ಭದಲ್ಲಿ ವಕೀಲ ಪ್ರಶಾಂತ್ ಭೂಷಣ್ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಸುಪ್ರೀಂ ಕೋರ್ಟ್, ನಾಲ್ಕು ವಿದ್ಯುನ್ಮಾನ ಮತಯಂತ್ರಗಳು ಬಿಜೆಪಿಗೆ ಒಂದು ಹೆಚ್ಚುವರಿ ಮತವನ್ನು ದಾಖಲಿಸಿದೆ ಎಂಬ ಹೇಳಿಕೆಯ ಬಗ್ಗೆ ತನಿಖೆ ನಡೆಸುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ.
ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಬೇಕೆಂದು ಆಯೋಗಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ವಿವಿಪ್ಯಾಟ್ ದಾಖಲೆಗಳ ವಿರುದ್ಧ ಇವಿಎಂಗಳನ್ನು ಶೇಕಡಾ 100 ರಷ್ಟು ಪರಿಶೀಲಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಗುರುವಾರ ಇವಿಎಂ-ವಿವಿಪ್ಯಾಟ್ ಕಾರ್ಯನಿರ್ವಹಣೆಯನ್ನು ಕುರಿತ ಮಾಹಿತಿಯನ್ನು ನೀಡುವಂತೆ ಕೇಂದ್ರ ಚುನಾವಣಾ ಆಯೋಗವನ್ನು ಕೇಳಿದೆ.
ಇವಿಎಂಗಳಲ್ಲಿ ಚಲಾವಣೆಯಾದ ಮತಗಳನ್ನು ವಿವಿಪ್ಯಾಟ್ ಪೇಪರ್ ಸ್ಲಿಪ್ ಜತೆಗೆ ಹೋಲಿಕೆ ಮಾಡುವ ಮೂಲಕ ಪರಿಶೀಲನೆ ನಡೆಸಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು. ಇದು 2024 ರ ಲೋಕಸಭಾ ಚುನಾವಣೆಗೆ ಕೆಲವು ದಿನಗಳ ಮೊದಲು ಬಂದಿದೆ, ಅದರ ಮೊದಲ ಹಂತವು ಶುಕ್ರವಾರದಿಂದ ಪ್ರಾರಂಭವಾಗುತ್ತದೆ.
ಇವಿಎಂ-ವಿವಿಪ್ಯಾಟ್ ಕಾರ್ಯನಿರ್ವಹಣೆಯನ್ನು ವಿವರಿಸಬೇಕೆಂಬ ಸುಪ್ರೀಂ ಕೋರ್ಟ್ ಸೂಚನೆಯ ಕುರಿತು ಉತ್ತರಿಸಿದ ಚುನಾವಣಾ ಆಯೋಗ ಮತಯಂತ್ರಗಳನ್ನು ಸ್ಟ್ರಾಂಗ್ ರೂಮ್ ನಲ್ಲಿ ಇರಿಸುವ ಮೊದಲು, ಎಲ್ಲಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಅಣಕು ಮತದಾನದ ಮೂಲಕ ಶೇಕಡಾ 100 ರಷ್ಟು ಮತಯಂತ್ರಗಳನ್ನು ಪರಿಶೀಲಿಸಲಾಗುತ್ತದೆ ಎಂದು ಚುನಾವಣಾ ಆಯೋಗ ಹೇಳಿದೆ.