ನವದೆಹಲಿ: ಕೇಂದ್ರ ಚುನಾವಣಾ ಆಯೋಗಕ್ಕೆ ಇಬ್ಬರು ಆಯುಕ್ತರ ನೇಮಕಾತಿಗೆ ತಡೆ ನೀಡಬೇಕೆಂದು ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಲು ನಿರಾಕರಿಸಿದೆ. ಈ ಅರ್ಜಿಯ ಕುರಿತು ವೇಳೆ ವಿಚಾರಣೆ ನಡೆಸಿದ ನ್ಯಾಯಪೀಠ ಇಬ್ಬರು ಚುನಾವಣಾ ಆಯುಕ್ತರ ನೇಮಕಕ್ಕೆ ಈಗ ತಡೆಯಾಜ್ಞೆ ನೀಡಿದರೆ ಗೊಂದಲ ಸೃಷ್ಟಿಯಾಗುತ್ತದೆ ಎಂದು ಅರ್ಜಿಯನ್ನು ತಿರಸ್ಕರಿಸಿತು.
ಕೆಲ ದಿನಗಳ ಹಿಂದಷ್ಟೇ ಸುಖಬೀರ್ ಸಿಂಗ್ ಸಂಧು ಹಾಗೂ ಜ್ಞಾನೇಶ್ ಕುಮಾರ್ ಅವರು ಚುನಾವಣಾ ಆಯುಕ್ತರಾಗಿ ನೇಮಕಗೊಂಡಿದ್ದು,ಕೇಂದ್ರ ಸರ್ಕಾರದ ಈ ನೇಮಕಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಅರ್ಜಿ ಸಲ್ಲಿಕೆಯಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಹಾಗೂ ದೀಪಾಂಕರ್ ದತ್ತಾ ನೇತೃತ್ವದ ನ್ಯಾಯಪೀಠವು, ಚುನಾವಣಾ ಆಯೋಗವು ಶಾಸಕಾಂಗದ ಹೆಬ್ಬೆರಳಿನ ಕೆಳಗಿದೆ ಎಂದು ಹೇಳಲು ಆಗುವುದಿಲ್ಲ.ಹಾಗಾಗಿ ಈಗ ನೇಮಕಕ್ಕೆ ತಡೆಯಾಜ್ಞೆ ನೀಡುವುದಿಲ್ಲ ವೆಂದು ಸ್ಪಷ್ಟಪಡಿಸಿದೆ.
ಇಬ್ಬರು ಚುನಾವಣಾ ಆಯುಕ್ತರನ್ನು ಹೊಸ ಕಾನೂನಿನ ಅನ್ವಯ ರಚಿಸಲಾದ ಸಮಿತಿಯು ನೇಮಕ ಮಾಡಿದೆ. ಕೇಂದ್ರ ಸರ್ಕಾರ ಜಾರಿಗೆ ತಂದ ನಿಯಮವನ್ನು ತಪ್ಪು ಎಂದು ಹೇಳಲು ಆಗದು. ಅಷ್ಟಕ್ಕೂ, ನೇಮಕಗೊಂಡಿರುವ ಇಬ್ಬರು ಆಯುಕ್ತರ ವಿರುದ್ಧ ಯಾವುದೇ ಆರೋಪಗಳಿಲ್ಲ. ಕೆಲವೇ ದಿನಗಳಲ್ಲಿ ಚುನಾವಣೆ ನಡೆಯಲಿದೆ.ಇದರಿಂದ ಗೊಂದಲ ಸೃಷ್ಟಿಯಾಗುತ್ತದೆ ಆದ್ದರಿಂದ ಇಂತಹ ಸಂದರ್ಭದಲ್ಲಿ ನೇಮಕಕ್ಕೆ ತಡೆಯಾಜ್ಞೆ ನೀಡಲು ಆಗುವುದಿಲ್ಲ ಎಂದು ಹೇಳಿತು.
ಮಾರ್ಚ್ 14ರಂದು ಕೇಂದ್ರ ಸರ್ಕಾರವು ಇಬ್ಬರು ಚುನಾವಣಾ ಆಯುಕ್ತರನ್ನು ನೇಮಕ ಮಾಡಿದೆ. ಪಂಜಾಬ್‌ನ ಬಿ. ಸುಖಬೀರ್ ಸಂಧು ಹಾಗೂ ಕೇರಳದ ಜ್ಞಾನೇಶ್ ಕುಮಾರ್ ಅವರನ್ನು ಚುನಾವಣಾ ಆಯುಕ್ತರನ್ನಾಗಿ ನೇಮಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರಿರುವ ಆಯ್ಕೆ ಸಮಿತಿ ಸಭೆಯಲ್ಲಿ ನೇಮಕ ಮಾಡಲಾಗಿತ್ತು.
ಆಯುಕ್ತರಾಗಿದ್ದ ಅರುಣ್ ಗೋಯೆಲ್ ಅವರ ಕೆಲ ದಿನಗಳ ಹಿಂದಷ್ಟೇ ವೈಯಕ್ತಿಕ ಕಾರಣಗಳನ್ನು ನೀಡಿ ರಾಜೀನಾಮೆ ನೀಡಿದ್ದರು. ಕಳೆದ ತಿಂಗಳು ಅನೂಪ್ ಚಂದ್ರ ಪಾಂಡೆ ಅವರ ನಿವೃತ್ತಿಯ ನಂತರ ಎರಡು ಚುನಾವಣಾ ಆಯುಕ್ತರ ಹುದ್ದೆಗಳು ತೆರವಾಗಿತ್ತು.