
ಕಾರ್ಕಳ, ನ 28: ಕಾರ್ಕಳ ಕ್ರೈಸ್ಟ್ ಕಿಂಗ್ ಕಾಲೇಜಿನ ಪ್ರಥಮ ವರ್ಷದ ಪಿಯು ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಏಂಜಲ್ ಅಲ್ಫೋನಿಸಾ ಜೇಮ್ಸ್ ಎಂಬಾಕೆ ಅಸ್ವಸ್ಥಗೊಂಡ ಕೇವಲ ಎರಡೇ ದಿನಗಳಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾಳೆ. ಹೆಬ್ರಿ ತಾಲೂಕಿನ ಮುದ್ರಾಡಿ ಗ್ರಾಮದ ಜೇಮ್ಸ್ ಎಂಬವರ ಮಗಳಾದ ಏಂಜಲ್ ಅಲ್ಫೋನಿಸಾ ಜೇಮ್ಸ್ ನ.25ರಂದು ಮಂಗಳವಾರ ಕಾಲೇಜಿನ ವಾರ್ಷಿಕ ಕ್ರೀಡಾಕೂಟಕ್ಕಾಗಿ ಕಾಲೇಜಿಗೆ ಬಂದಿದ್ದಳು. ಬಳಿಕ ಮಧ್ಯಾಹ್ನ ಮನೆಗೆ ಹೋದವಳಿಗೆ ಏಕಾಎಕಿ ವಾಂತಿ ಬೇಧಿ ಶುರುವಾಗಿತ್ತು. ತಕ್ಷಣವೇ ಆಕೆಯ ಪೋಷಕರು ಅವಳನ್ನು ಹೆಬ್ರಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿದ್ದರು. ಇದರಿಂದ ಸ್ವಲ್ಪಮಟ್ಟಿಗೆ ಚೇತರಿಸಿಕೊಂಡಿದ್ದ ಏಂಜಲ್ ಅಲ್ಫೋನಿಸಾ ಜೇಮ್ಸ್ ಬುಧವಾರ ಸಂಜೆವೇಳೆ ಮತ್ತೆ ತೀವೃವಾಗಿ ಅಸ್ವಸ್ಥಗೊಂಡಾಗ ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಆಕೆಯ ಸ್ಥಿತಿ ಗಂಭೀರವಾಗಿದೆ ನೀವು ಮಣಿಪಾಲ ಆಸ್ಪತ್ರೆಗೆ ದಾಖಲಿಸಿ ಎಂದು ಆಸ್ಪತ್ರೆಯ ವೈದ್ಯರು ಹೇಳಿದ ಹಿನ್ನಲೆಯಲ್ಲಿ ಬುಧವಾರ ರಾತ್ರಿಯೇ ಆಕೆಯ ಪೋಷಕರು ಮಣಿಪಾಲಕ್ಕೆ ಕರೆದುಕೊಂಡು ಹೋಗಿದ್ದರು.
ಈ ಸಂದರ್ಭದಲ್ಲಿ ಆಕೆಯ ಆರೋಗ್ಯ ಸ್ಥಿತಿ ಅತ್ಯಂತ ಚಿಂತಾಜನಕವಾಗಿದ್ದ ಹಿನ್ನಲೆಯಲ್ಲಿ ವೈದ್ಯರು ಚಿಕಿತ್ಸೆ ನೀಡಿದರೂ ಆಕೆ ಗುರುವಾರ ಮುಂಜಾನೆ 2.30ಕ್ಕೆ ಮೃತಪಟ್ಟಿದ್ದಳು. ಏಂಜಲ್ ಅಲ್ಫೋನಿಸಾ ಜೇಮ್ಸ್ ದೇಹದ ಪ್ರಮುಖ ಅಂಗಾಗಗಳು ವೈಫಲ್ಯಗೊಡ ಹಿನ್ನಲೆಯಲ್ಲಿ ಆಕೆ ಮೃತಪಟ್ಟಿದ್ದಾಳೆ ಎಂದು ಮರಣೋತ್ತರ ಪರೀಕ್ಷಾ ವರದಿಯಲ್ಲಿ ತಿಳಿದುಬಂದಿದೆ ಎಂದು ಆಕೆಯ ತಂದೆ ಜೇಮ್ಸ್ ತಿಳಿಸಿದ್ದಾರೆ. ಆದರೆ ಆಕೆಗೆ ಯಾವುದೇ ಕಾಯಿಲೆ ಇಲ್ಲದೇ ಏಕಾಎಕಿ ಕೇವಲ 2 ದಿನದೊಳಗೆ ಎಳೆಯ ಬಾಲಕಿ ಸಾವನ್ನಪ್ಪಿರುವ ಕುರಿತು ಸಾಕಷ್ಟು ಅನುಮಾನಗಳು ಕೂಡ ವ್ಯಕ್ತವಾಗಿದೆ. ಯಾಕೆಂದರೆ ಯಾವುದೇ ಅನಾರೋಗ್ಯ ಸಮಸ್ಯೆಗಳು ಉಂಟಾದಾಗ ದೇಹದಲ್ಲಿ ಒಂದಷ್ಟು ಲಕ್ಷಣಗಳು ಕಾಣಿಸುತ್ತವೆ. ಅದರಂತೆ ಆಕೆಗೆ ವಾಂತಿ,ಬೇಧಿ ಲಕ್ಷಣಗಳು ಕಾಣಿಸಿಕೊಂಡಿದೆ, ಆದರೆ ಇದರಿಂದ ಕೇವಲ 2 ದಿನದಲ್ಲೇ ಅಂಗಾಗ ವೈಫಲ್ಯವಾಗುತ್ತದೆ ಎಂದಾದರೆ ಸಹಜವಾಗಿ ಈಕೆಯ ಸಾವಿನ ಕುರಿತು ಒಂದಷ್ಟು ಅನುಮಾನ ಮೂಡುತ್ತದೆ. ಮೃತ ವಿದ್ಯಾರ್ಥಿನಿ ಏಂಜಲ್ ಅಲ್ಫೋನಿಸಾ ಜೇಮ್ಸ್ ಕ್ರೀಡಾಕೂಟದ ದಿನ ತನ್ನ ಸ್ನೇಹಿತೆಯರ ಜೊತೆ ಆಹಾರ ಪದಾರ್ಥ ಸೇವನೆ ಮಾಡಿದ್ದಳು ಎನ್ನುವ ಮಾಹಿತಿ ಲಭಿಸಿದ್ದು, ಈ ಕುರಿತು ಪೊಲೀಸರು ಪೋಷಕರಿಂದ ಮಾಹಿತಿ ಪಡೆದಿದ್ದಾರೆ.
ಈಕೆಯ ಸಾವಿನ ಕುರಿತು ತಂದೆ ಜೇಮ್ಸ್ ಅನುಮಾನ ವ್ಯಕ್ತಪಡಿಸಿದ್ದು, ನನ್ನ ಮಗಳು ಆರೋಗ್ಯವಾಗಿದ್ದಳು, ಬುಧವಾರ ಬೆಳಗ್ಗೆ ತನ್ನ ಬಟ್ಟೆಗಳನ್ನು ತೊಳೆದು ಮಧ್ಯಾಹ್ನ ಏಕಾಎಕಿ ಅಸ್ವಸ್ಥಳಾಗಿ ಮರುದಿನ ಮೃತಪಟ್ಟಿರುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ನನ್ನ ಮಗಳಿಗೆ ಯಾವುದೇ ಗಂಭೀರ ಸ್ವರೂಪದ ಕಾಯಿಲೆಗಳು ಇರಲಿಲ್ಲ ಆದರೆ ಹಠಾತ್ ಬಹು ಅಂಗಾಂಗ ವೈಫಲ್ಯದಿಂದ ಆಕೆಯ ಸಾವಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ, ಮರಣೋತ್ತರ ಪರೀಕ್ಷೆಯ ಬಳಿಕ ಆಕೆಯ ಅಂಗಾಂಗಗಳ ಸ್ಯಾಂಪಲ್ ಎಫ್‌ಎಸ್‌ಎಲ್ ಗೆ ಕಳುಹಿಸಲಾಗಿದ್ದು, ಪೊಲೀಸರು ಈ ಕುರಿತು ತನಿಖೆ ನಡೆಸಬೇಕು ಎಂದು ಜೇಮ್ಸ್ ಹೇಳಿದ್ದಾರೆ.
ಮೃತಪಟ್ಟ ವಿದ್ಯಾರ್ಥಿನಿ ಏಂಜಲ್ ಅಲ್ಫೋನಿಸಾ ಜೇಮ್ಸ್ ಸಾವಿನ ಕುರಿತು ಈಗಾಗಲೇ ಅಸಹಜ ಸಾವು ಪ್ರಕರಣ ದಾಖಲಾಗಿದೆ. ಪೋಷಕರ ಪ್ರಕಾರ ಆಕೆಗೆ ಫುಡ್ ಪಾಯ್ಸನ್ ಆಗಿರಬಹುದು ಎನ್ನುವ ಮಾಹಿತಿ ಇದೆ, ಆಕೆಯ ಅಂಗಾAಗಗಳ ಸ್ಯಾಂಪಲ್ ಎಫ್‌ಎಸ್‌ಎಲ್ ಗೆ ಕಳುಹಿಸಲಾಗಿದ್ದು, ಪರೀಕ್ಷಾ ವರದಿಯ ಬಳಿಕ ಸಾವಿನ ಕಾರಣ ತಿಳಿಯಲಿದೆ ಎಂದು ಹೆಬ್ರಿ ಪೊಲೀಸ್ ಠಾಣಾಧಿಕಾರಿ ರವಿ ತಿಳಿಸಿದ್ದಾರೆ.
.
