ಕಾರ್ಕಳ: ಕಸಮುಕ್ತ ಪರಿಸರ ಉತ್ತಮ ಆರೋಗ್ಯಕ್ಕೆ ಪೂರಕವಾಗಿದೆ.ಪ್ರಧಾನಿ ನರೇಂದ್ರ ಮೋದಿಯವರು 2019ರಲ್ಲಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ದಿನದಿಂದಲೇ ಸ್ವಚ್ಚತೆಯ ವಿಶೇಷ ಜಾಗೃತಿ ಮೂಡಿಸಿದರು. ಸ್ವಚ್ಛ ಭಾರತ ಎನ್ನುವ ಸಂಕಲ್ಪದೊಂದಿಗೆ ಪ್ರಧಾನಿ ನೀಡಿದ ಕರೆಗೆ ದೇಶದಲ್ಲೆಡೆ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಸಾಕಷ್ಟು ಸಂಘಟನೆಗಳು ಸ್ವಚ್ಚತಾ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಕಸಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿವೆ.
ಇದೇ ಸಂದರ್ಭದಲ್ಲಿ ಸ್ವಚ್ಚ ಸಮಾಜ ನಿರ್ಮಾಣದ ದೃಢಸಂಕಲ್ಪ ಹೊತ್ತು ಯುವ ಬ್ರಿಗೇಡ್ ಮತ್ತು ರಾಮಕೃಷ್ಣ ಮಿಷನ್ ಮಂಗಳೂರು ಇವರುಗಳ ಸ್ವಚ್ಛ ಕಾರ್ಯದಿಂದ ಪ್ರೇರಣೆ ಪಡೆದ ಸ್ವಚ್ಚ ಕಾರ್ಕಳ ಬ್ರಿಗೇಡ್ ತಂಡವು ಕಾರ್ಕಳವನ್ನು ಸ್ವಚ್ಛ ಹಾಗೂ ಕಸಮುಕ್ತ ಮಾಡುವ ಉದ್ದೇಶದಿಂದ ಕಳೆದ 2019 ರಿಂದ ಪ್ರತೀ ಭಾನುವಾರ ಸ್ವಚ್ಚತಾ ಕಾರ್ಯಕ್ರಮ ನಡೆಸಿಕೊಂಡು ಬಂದಿದೆ. ಇದೀಗ ಸ್ವಚ್ಛ ಕಾರ್ಕಳ ಬ್ರಿಗೇಡ್ ತಂಡದ ೫ನೇ ವರ್ಷಾಚರಣೆಯ ಅಂಗವಾಗಿ ಜೂ.2 ರಂದು ಭಾನುವಾರ ಕಾರ್ಕಳದ ಬಾಹುಬಲಿ ಪ್ರವಚನ ಮಂದಿರದಲ್ಲಿ “ಸ್ವಚ್ಛ ಸಂಗಮ: ಸ್ವಚ್ಛತಾ ವಿಚಾರ-ವಿನಿಮಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸ್ವಚ್ಛ ಸಂಗಮದ ಆಮಂತ್ರಣ ಪತ್ರಿಕೆಯನ್ನು ಕಾರ್ಕಳದ ಉದ್ಯಮಿ ಹಾಗೂ ಕಾರ್ಕಳ ಟೈಗರ್ಸ್ ತಂಡದ ಸಂಚಾಲಕ ಬೋಳ ಪ್ರಶಾಂತ್ ಕಾಮತ್ ಬಿಡುಗಡೆಗೊಳಿಸಿದರು.
ಸ್ವಚ್ಛ ಸಂಗಮ ಕಾರ್ಯಕ್ರಮದ ಅಂಗವಾಗಿ “ಪರಿಸರ ಸಂರಕ್ಷಣೆ” ಮತ್ತು “ಸ್ವಚ್ಛ ಭಾರತ ಪರಿಕಲ್ಪನೆಯಲ್ಲಿ ಯುವಕನತೆಯ ಪಾತ್ರ” ಎಂಬ ವಿಷಯಗಳ ಕುರಿತಾಗಿ ಸ್ವಚ್ಛ ಮಂಗಳೂರು ಮಿಷನ್ ನ ಸಂಚಾಲಕ ರಂಜನ್ ಬೆಳ್ಳಿರ್ಪಾಡಿ ಮತ್ತು ಯೂನಿವರ್ಸಲ್ ನಾಲೆಜ್ ಟ್ರಸ್ಟ್, ಮಂಗಳೂರು ಇದರ ಸ್ಥಾಪಕ ರೋಹನ್ ಎಮ್ ಶಿರಿ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ “ಸಂವಾದ ಕಾರ್ಯಕ್ರಮ” ನಡೆಸಿಕೊಡಲಿದ್ದಾರೆ. ಅಲ್ಲದೇ ಪ್ಲಾಸ್ಟಿಕ್ ಗೆ ಪರ್ಯಾಯ ಯಾವುದು ಎನ್ನುವ ಕುರಿತು ಡಾ. ಪ್ರಸನ್ನ ಕಾಕುಂಜೆಯವರು ಸಂಪನ್ಮೂಲ ವ್ಯಕ್ತಿಯಾಗಿ ವಿವರಿಸಲಿದ್ದಾರೆ
RRR: (Reduce- Reuse- Recycle) ಎಂಬ ವಿಷಯದ ಮೇಲೆ ರೀಲ್ಸ್ ಸ್ಪರ್ಧೆಯನ್ನು ಆಯೋಜಿಸಿದ್ದು, ಪ್ರಥಮ ಸ್ಥಾನ: ₹10,000, 2ನೇ ಸ್ಥಾನ: ₹5,000, ಹಾಗೂ 3ನೇ ಸ್ಥಾನ: ₹2,500 ನಗದು ಮತ್ತು ಬಹುಮಾನವನ್ನು ಈ ಕಾರ್ಯಕ್ರಮದಲ್ಲಿ ವಿತರಿಸಲಾಗುತ್ತದೆ.
ಸ್ವಚ್ಛ ಕಾರ್ಕಳ ಬ್ರಿಗೇಡ್ ಕಾರ್ಕಳದ 5ನೇ ವಾರ್ಷಿಕಾಚರಣೆಯ ಸಭಾ ಕಾರ್ಯಕ್ರಮಕ್ಕೆ ಸ್ವಚ್ಛಕಾರ್ಕಳ ಸ್ವರ್ಣ ಕಾರ್ಕಳದ ರೂವಾರಿ ಶಾಸಕ ವಿ ಸುನಿಲ್ ಕುಮಾರ್ ಹಾಗೂ ಮತ್ತು ನದಿ, ಕಡಲತೀರಾಗಳನ್ನು ಸಂರಕ್ಷಿಸಲು ಹಲವಾರು ಸ್ವಚ್ಛತಾ ಅಭಿಯಾನಗಳ ನೇತೃತ್ವ ವಹಿಸಿಕೊಂಡ ಆಳ್ವಾಸ್ ಎಜ್ಯುಕೇಶನ್ ಫೌಂಡೇಶನ್ ನ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸ್ವಚ್ಛ ಕಾರ್ಕಳ ಬ್ರಿಗೇಡ್ ಪ್ರಕಟಣೆ ತಿಳಿಸಿದೆ.