ಬೆಂಗಳೂರು: ಸಣ್ಣಪುಟ್ಟ ವ್ಯಾಪಾರಿಗಳಿಗೆ ನೋಟಿಸ್ ನೀಡಿರುವುದು ರಾಜ್ಯ ಸರ್ಕಾರದ ವಾಣಿಜ್ಯ ತೆರಿಗೆ ಇಲಾಖೆ. ಇದರಲ್ಲಿ ಕೇಂದ್ರ ಸರ್ಕಾರದ ಯಾವುದೇ ಪಾತ್ರವಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸ್ಪಷ್ಟನೆ ನಿಡಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಸಣ್ಣಪುಟ್ಟ ವ್ಯಾಪಾರಿಗಳಿಗೆ ತೆರಿಗೆ ಬಾಕಿ ನೋಟಿಸ್ ಕೊಟ್ಟು, ಇದೀಗ ರಾಜ್ಯ ಸರ್ಕಾರಕ್ಕೂ ಹಾಗೂ ಜಿ ಎಸ್ ಟಿ ನೋಟಿಸ್ ಗೂ ಯಾವುದೇ ಸಂಬAಧವಿಲ್ಲ ಎಂದು ಹೇಳುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದ. ಜಿ ಎಸ್ ಟಿ ಕೌನ್ಸಿಲ್ ನಲ್ಲಿ ಯಾವುದೇ ತೀರ್ಮಾನ ತಗೆದುಕೊಳ್ಳಲು ಮಹತ್ವದ ಪಾತ್ರ ವಹಿಸಿರುವುದು ರಾಜ್ಯ ಸರ್ಕಾರಗಳು. ಕೇಂದ್ರ ಸರ್ಕಾರಕ್ಕೆ ಕೇವಲ 3 ನೇ ಒಂದು ಭಾಗ ಮಾತ್ರ ಅಧಿಕಾರವಿದೆ. ಉಳಿದ ಅಧಿಕಾರ ರಾಜ್ಯ ಸರ್ಕಾರದ ಕೈಯಲ್ಲಿದೆ. 3ನೇ ಎರಡು ಭಾಗದಷ್ಟು ಅಧಿಕಾರ ಹೊಂದಿರುವ ರಾಜ್ಯ ಸರ್ಕಾರಗಳ ನಿರ್ಣಯವೇ ಅಂತಿಮವಾಗಿರಲಿದೆ. ಇದೀಗ ಹಣ್ಣು, ಹಾಲು, ತರಕಾರಿ ಸೇರಿದಂತೆ ದಿನನಿತ್ಯದ ಅಗತ್ಯ ಸರಕು ಸೇವಾ ವ್ಯಾಪಾರಿಗಳಿಗೆ ನೋಟಿಸ್ ನೀಡಿ, ಅವರಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ಕಿಡಿಕಾರಿದರು. ಯುಪಿಐ ಟ್ರಾನ್ಸಾಕ್ಷನ್ ಇದೀಗ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಈ ಮಧ್ಯೆ ರಾಜ್ಯದಲ್ಲಿ ಡಿಜಿಟಲ್ ಟ್ರಾನ್ಸಾಕ್ಷನ್ ಹದಗೆಡಿಸುವ ದುಸಾಹಸಕ್ಕೆ ಕಾಂಗ್ರೆಸ್ ಸರ್ಕಾರ ಕೈಹಾಕಿರುವುದು ನಿಜಕ್ಕೂ ದುರಂತ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಣ್ಣ ಸಣ್ಣ ವ್ಯಾಪಾರಿಗಳಿಗೆ ನೋಟಿಸ್ ನೀಡಿರುವುದನ್ನು ವಿರೋಧಿಸಿ ಜುಲೈ 23 ಬುಧವಾರ ಮತ್ತು, ಜುಲೈ 24 ಗುರುವಾರದಂದು ಹಾಲು ಉತ್ಪನ್ನಗಳ ಮಾರಾಟ ಮಾಡದಿರಲು ಅಂಗಡಿ ಮಾಲೀಕರು ನಿರ್ಧರಿಸಿದ್ದಾರೆ. ಹಾಗೆಯೇ ಜುಲೈ 25ರಂದು ಎಲ್ಲಾ ಅಂಗಡಿಗಳನ್ನ ಬಂದ್ ಮಾಡಿ ಫ್ರೀಡಂಪಾರ್ಕ್ನಲ್ಲಿ ಭಾರೀ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.ಈ ವಿಚಾರವಾಗಿ ರಾಜಕೀಯ ನಾಯಕರ ಆರೋಪ-ಪ್ರತ್ಯಾರೋಪಗಳು ಶುರುವಾಗಿದ್ದು, ಕಾಂಗ್ರೆಸ್‌ನವರು ಕೇಂದ್ರದ ಮೇಲೆ ಬೊಟ್ಟು ಮಾಡುತ್ತಿದ್ದರೆ, ಬಿಜೆಪಿ ಹಾಗೂ ಜೆಡಿಎಸ್‌ನವರು ಕಾಂಗ್ರೆಸ್ ಸರ್ಕಾರದತ್ತ ಕೈ ಮಾಡಿ ತೋರಿಸುತ್ತಿದ್ದಾರೆ.