ಕಾರ್ಕಳ: ಕಳೆದ ಒಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ.
ಕಾರ್ಕಳ ತಾಲೂಕಿನ ಹಲವೆಡೆ ಭಾರೀ ಗಾಳಿ ಮಳೆಯಿಂದ ಹಲವು ಮನೆಗಳು ಕುಸಿದಿದ್ದು ಹಲವೆಡೆ ಕೃಷಿ ಜಮೀನಿಗೆ ಹಾನಿಯಾಗಿದೆ.

ಇನ್ನಾ ಗ್ರಾಮದ ನೆರೆಪೀಡಿತ ಪ್ರದೇಶಗಳಿಗೆ ಕಾರ್ಕಳ ತಹಶೀಲ್ದಾರ್ ನರಸಪ್ಪ ತಹಸೀಲ್ದಾರ್ ಹಾಗೂ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.ಇದಲ್ಲದೇ ಮುಂಡ್ಕೂರು ಗ್ರಾಮದ ಮುಲ್ಲಡ್ಕ ಕೊರಗರ ಕಾಲೊನಿಗೆ ಭೇಟಿ ನೀಡಿ ಮಳೆ ಹಾನಿ ಕುರಿತು ಪರಿಶೀಲನೆ ನಡೆಸಿದರು.

ಕಾರ್ಕಳ ಪುರಸಭಾ ವ್ಯಾಪ್ತಿಯ ಕುಂಟಲ್ಪಾಡಿಯ ಗಾಲಿಮಾರಿ ದೇವಸ್ಥಾನದ ಬಳಿಯ ಮನೆಯ ಆವರಣಕ್ಕೆ ನೀರು ನುಗ್ಗಿದ್ದು ತಹಶಿಲ್ದಾರ್ ಹಾಗೂ ಪುರಸಭಾ ಮುಖ್ಯಾಧಿಕಾರಿ ರೂಪಾ ಶೆಟ್ಟಿ, ಕಂದಾಯ ನಿರೀಕ್ಷಕ ಶಿವ ಪ್ರಸಾದ್ ರಾವ್ ಮುಂತಾದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಿಯ್ಯಾರು ಸೂರಾಲು ವಿಠಲ ಎಂಬವರ ಮನೆಗೆ ಹಾನಿಯಾಗಿ 50 ಸಾವಿರ ನಷ್ಟ ಸಂಭವಿಸಿದೆ. ಪುರಸಭಾ ವ್ಯಾಪ್ತಿಯ ಕರಿಯಕಲ್ಲು ಹಿಂದೂ ರುದ್ರಭೂಮಿಯ ಮೇಲ್ಛಾವಣಿಗೆ ಮರಬಿದ್ದು 50 ಸಾವಿರ ನಷ್ಟ ಸಂಭವಿಸಿದೆ.
ಕೆರ್ವಾಶೆ ಗ್ರಾಮದ ಗೋವಿಂದ ನಾಯಕ್ ಎಂಬವರ ಅಡಿಕೆ ಮರಗಳು ಭಾರೀ ಗಾಳಿಗೆ ಉರುಳಿ ಬಿದ್ದು 10 ಸಾವಿರ ನಷ್ಟ ಸಂಭವಿಸಿದೆ.















