ಬೆಂಗಳೂರು: ದೇವಾಲಯಗಳಿಂದ ಸಂಗ್ರಹವಾದದ ಹಣವನ್ನು ಮಸೀದಿ, ಚರ್ಚ್ ಹಾಗೂ ಇತರೆ ಇಲಾಖೆಗಳಿಗೆ ನೀಡಲಾಗುತ್ತಿದೆ ಎನ್ನುವ ಆರೋಪ ಕೇಳಿಬರುತ್ತಿದೆ. ಹೀಗಾಗಿ ದೇವಸ್ಥಾನದ ಹುಂಡಿ ಹಣ ದೇಗುಲದ ಅಭಿವೃದ್ಧಿಗೆ ಮಾತ್ರ ಬಳಕೆ ಮಾಡಲಾಗುತ್ತೆ. ದೇಗುಲದ ಹಣ ಬೇರೆ ಇಲಾಖೆಗಳಿಗೆ ವರ್ಗಾಯಿಸುವುದಿಲ್ಲ ಎಂದು ಎಲ್ಲಾ ದೇವಸ್ಥಾನಗಳಲ್ಲಿ ಫಲಕ ಹಾಕಲು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಸೂಚನೆ ನೀಡಿದ್ದಾರೆ.ಕರ್ನಾಟಕದ ಮುಜರಾಯಿ ಇಲಾಖೆಯ 36 ಸಾವಿರ ದೇಗುಲಗಳಲ್ಲಿ ಫಲಕ ಹಾಕಲು ರಾಜ್ಯ ಸರ್ಕಾರ ಮುಂದಾಗಿದ್ದು, ಈ ಮೂಲಕ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಸ್ಪಷ್ಟನೆ ನೀಡಲು ಮುಜರಾಯಿ ಇಲಾಖೆ ಮುಂದಾಗಿದೆ.
ಕರ್ನಾಟಕದಲ್ಲಿ ಒಟ್ಟು ಮುಜರಾಯಿ ಇಲಾಖೆ ಅಡಿಯಲ್ಲಿ 36 ಸಾವಿರ ದೇವಸ್ಥಾನಗಳು ಇದ್ದು, ಇವುಗಳಿಗೆ ಕಾಣಿಕೆ ಹರಿದುಬರುತ್ತಿದೆ. ಹಾಸನಾಂಬೆ, ಕೊಪ್ಪಳದ ಹುಲಿಗೆಮ್ಮ, ಸವದತ್ತಿ ಯಲ್ಲಮ್ಮ, ಹೀಗೆ ದೊಡ್ಡ ದೊಡ್ಡ ದೇವಸ್ಥಾನಗಳಲ್ಲಿ ಲಕ್ಷಾಂತರ ರೂಪಾಯಿ ಕಾಣಿಕೆ ಸಂಗ್ರಹವಾಗುತ್ತೆ. ಅದರಲ್ಲೂ ಮುಖ್ಯವಾಗಿ ಈ ಬಾರಿ ಹಾಸನಾಂಬೆಗೆ 12.63 ಕೋಟಿ ಆದಾಯ ಬಂದಿದೆ.
ಇನ್ನು ದೇವಸ್ಥಾನದಿಂದ ಬಂದ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಉಪಯೋಗ ಮಾಡಿಕೊಳ್ಳಲಾಗುತ್ತಿದೆ. ಅದರಲ್ಲೂ ಹಿಂದೂ ದೇಗುಲದ ಹಣವನ್ನು ಮಸೀದಿ, ಚರ್ಚ್ ಗಳ ಅಭಿವೃದ್ಧಿ ನೀಡಲಾಗುತ್ತಿದೆ. ಹೀಗಾಗಿ ಹಿಂದೂ ದೇಗುಲಗಳು ಮೂಲಸೌಕರ್ಯಗಳಿಂದ ವಂಚಿತವಾಗಿವೆ ಎನ್ನುವ ಆರೋಪಗಳು ಕೇಳಿಬರುತ್ತಿವೆ. ಇದರಿಂದ ದೇಗುಲದ ಹಣ ಬೇರೆ ಇಲಾಖೆಗೆ ವರ್ಗಾವಣೆ ಮಾಡಲ್ಲ ಎಂದು ಗ್ಯಾರಂಟಿ ಬೋರ್ಡ್ ಮೂಲಕ ಭಕ್ತರಿಗೆ ಸ್ಪಷ್ಟಪಡಿಸಲು ಮುಜುರಾಯಿ ಇಲಾಖೆ ಮುಂದಾಗಿದೆ.
































































































