ಶಿವಕಾಶಿ: ಸರ್ಕಾರಗಳು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದರೂ ಪಟಾಕಿ ಕಾರ್ಖಾನೆಗಳ ಅಗ್ನಿ ದುರಂತಕ್ಕೆ ಕಡಿವಾಣ ಬಿದ್ದಿಲ್ಲ. ತಮಿಳುನಾಡಿನ ಶಿವಕಾಶಿಯಲ್ಲಿ ಮತ್ತೊಂದು ಪಟಾಕಿ ತಯಾರಿಕಾ ಘಟಕ ಸ್ಫೋಟಗೊಂಡು ಭೀಕರ ದುರಂತದ ನಡೆದಿದೆ. ತಮಿಳುನಾಡಿನ ಶಿವಕಾಶಿ ಬಳಿಯಲ್ಲಿರುವ ಚೆನ್ನಗಲಂಪಟ್ಟಿ ಪಟಾಕಿ ಫ್ಯಾಕ್ಟರಿಯಲ್ಲಿ ಸ್ಫೋಟ ಸಂಭವಿಸಿದ್ದು,ಕೆಲಸದ ಸಮಯದಲ್ಲೇ ಈ ಸ್ಪೋಟ ನಡೆದ ಪರಿಣಾಮ ಕೆಲಸ ಮಾಡುತ್ತಿದ್ದ 8 ಮಂದಿ ಕಾರ್ಮಿಕರು ಈ ಸ್ಪೋಟಕ್ಕೆ ಬಲಿಯಾಗಿದ್ದು ಅವರ ದೇಹಗಳು ಛಿದ್ರಗೊಂಡಿವೆ. ಇನ್ನು 10ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಫೋಟದ ಪರಿಣಾಮ ಇಡೀ ಫ್ಯಾಕ್ಟರಿ ಹೊತ್ತಿ ಉರಿದಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಧಾವಿಸಿದ್ದು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿದೆ.
ಯಾವ ಕಾರಣಕ್ಕೆ ಬೆಂಕಿ ಹೊತ್ತಿಕೊಂಡಿದೆ ಅನ್ನೋ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಸದ್ಯ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದು, ಬೆಂಕಿಯ ಕೆನ್ನಾಲಗೆ ಪಕ್ಕದ ಫ್ಯಾಕ್ಟರಿಗೆ ತಗಲುವ ಅಪಾಯವನ್ನು ನಿಯಂತ್ರಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಕಾರ್ಮಿಕರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇತ್ತ ಫ್ಯಾಕ್ಟರಿಯಲ್ಲಿ ಸಂಪೂರ್ಣ ಹೊಗೆ ತುಂಬಿಕೊಂಡಿರುವ ಕಾರಣ ಕಾರ್ಯಾಚರಣೆ ಕಷ್ಟವಾಗಿದೆ.
ಫ್ಯಾಕ್ಟರಿಗೆ ಕಾನೂನುಬದ್ಧ ಪರವಾನಗಿ ಇದೆ. ಲೈಸೆನ್ಸ್ ಪಡೆದು ಪಟಾಕಿ ಫ್ಯಾಕ್ಟರಿ ನಡೆಸುತ್ತಿದ್ದಾರೆ. ಆದರೆ ಈ ಸ್ಫೋಟಕ್ಕೆ ಕಾರಣವೇನು ಅನ್ನೋದರ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಘಟನೆಯಲ್ಲಿ ಮೃತಪಟ್ಟ 8 ಮಂದಿ ಪೈಕಿ ಮಹಿಳೆಯರೂ ಸೇರಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಘಟನೆ ಕುರಿತು ಸ್ಥಳೀಯ ಮುಖಂಡರು ಆಘಾತ ವ್ಯಕ್ತಪಡಿಸಿದ್ದಾರೆ.
ಇತ್ತ ಗಯಾಳುಗಳ ಪರಿಸ್ಥಿತಿ ಗಂಭೀರವಾಗಿದೆ. ಶಿವಕಾಶಿ ಜಿಲ್ಲಾಧಿಕಾರಿ ಗಾಯಾಳುಗಳ ಸೂಕ್ತ ಚಿಕಿತ್ಸೆ ನೀಡುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮಾಹಿತಿ ತಿಳಿಯುತ್ತಿದ್ದಂತೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದವರ ಕುಟುಂಬಸ್ಥರು ಸ್ಥಳಕ್ಕೆ ಧಾವಿಸಿದ್ದಾರೆ. ಇತ್ತ ಹಲವರು ಆಸ್ಪತ್ರೆಗೆ ತೆರಳಿದ್ದಾರೆ.
