ಶಿವಮೊಗ್ಗ: ಮಂಗಳೂರಿAದ ಸಾಗರ ತಾಲೂಕಿನ ದೇವಸ್ಥಾನಗಳಿಗೆ ಪ್ರವಾಸಕ್ಕೆ ಬಂದಿದ್ದ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ತಿರುವಿನಲ್ಲಿ ಪಲ್ಟಿಯಾಗಿದ್ದು, 21ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಅರಳಗೊಡು ಸಮೀಪದ ಮುಪ್ಪನೆ ಬಳಿ ಇಂದು (ಭಾನುವಾರ) ಮಧ್ಯಾಹ್ನ ಈ ದುರ್ಘಟನೆ ನಡೆದಿದೆ.
ಮಂಗಳೂರಿನ ಬಿಸಿ ರೋಡ್ ನಿವಾಸಿಗಳ ತಂಡ ಶನಿವಾರ ರಾತ್ರಿ ಸ್ನೇಹಿತರ ಜೊತೆ ಸಾಗರ ತಾಲೂಕಿನ ದೇವಸ್ಥಾನಗಳಿಗೆ ಪ್ರವಾಸ ಕೈಗೊಂಡಿದ್ದು, ಇಂದು ಬೆಳಿಗ್ಗೆ ಸಾಗರದ ಜೋಗ ಜಲಪಾತ ವೀಕ್ಷಣೆ ಮಾಡಿ, ಬಲೆ ಪದ್ಮಾವತಿ ದೇವಸ್ಥಾನ ವೀಕ್ಷಣೆ ಮಾಡಲು ಹೋಗುತ್ತಿರುವ ಸಂದರ್ಭದಲ್ಲಿ ಅರಳಗೊಡು ಸಮೀಪ ಬಸ್ ಪಲ್ಟಿಯಾಗಿದೆ. ಕಾರ್ಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಬಸ್ ನಲ್ಲಿದ್ದ 60 ಜನರ ಪೈಕಿ 21 ಜನರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ 12 ಕ್ಕೂ ಅಧಿಕ ಆಂಬ್ಯುಲೆನ್ಸ್ ಗಳಲ್ಲಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.