Share this news

ಕಾರ್ಕಳ:ಶಾಸನ ಸಭೆಯಲ್ಲಿ ಇಡೀ ರಾಜ್ಯದ ಜನತೆಯನ್ನು ಉದ್ದೇಶಿಸಿ ಮಾತನಾಡುವಾಗ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಗರಣ ನಡೆದಿದೆ ಎಂದು ಒಪ್ಪಿಕೊಂಡಿದ್ದ ಸಿದ್ದರಾಮಯ್ಯನವರು
ನಿಗಮದಲ್ಲಿ ನಡೆದ ಅವ್ಯವಹಾರ ಸಂಬಂಧ ಸಚಿವ ನಾಗೇಂದ್ರ ಅವರಿಂದ ರಾಜೀನಾಮೆ ಪಡೆದಿದ್ದರು.ಇದೀಗ ಜಾಮೀನಿನ ಮೇಲೆ ಬಿಡುಗಡೆಯಾದ ಮಾಜಿ ಸಚಿವ ನಾಗೇಂದ್ರ ಅವರಿಂದ ವಾಲ್ಮೀಕಿ ಜಯಂತಿ ದಿನದಂದು ಸನ್ಮಾನ ಮಾಡಿಸಿಕೊಂಡ ಸಿಎಂ ಸಿದ್ದರಾಮಯ್ಯನವರಿಗೆ ವಾಲ್ಮೀಕಿ ಸಮುದಾಯದ ಕುರಿತು ಮಾತನಾಡುವ ನೈತಿಕತೆ ಇಲ್ಲವೆಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸುನಿಲ್ ಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಅಕ್ರಮ ಹಣ ವರ್ಗಾವಣೆಯಾಗಿದೆ ಎಂದು ಜಾರಿ ನಿರ್ದೇಶನಾಲಯ ನಾಗೇಂದ್ರನನ್ನು ಬಂಧಿಸಿರುವ ವಿಚಾರ ರಾಜ್ಯದ ಜನತೆಯ ಎದುರು ಮುಕ್ತವಾಗಿ ನಡೆದ ಘಟನಾವಳಿಯಾಗಿದೆ. ಅಕ್ರಮ ಎಸಗಿ ಜೈಲಿಗೆ ಹೋಗಿ ಬಂದ ಆರೋಪಿಯೊಬ್ಬ ಈಗ ನೇರಾನೇರ ನಿಮ್ಮ ನಿವಾಸಕ್ಕೆ ಬಂದು ವಿಜಯೋತ್ಸವ ನಡೆಸಿ ಬಂದವರಂತೆ ಸನ್ಮಾನ ಮಾಡುತ್ತಾರೆಂದರೆ ಏನರ್ಥ ? ಈ ಅಕ್ರಮಕ್ಕೆ ನಿಮ್ಮ ಚಿತಾವಣೆ ಇತ್ತೆ ಹಾಗಾದರೆ ? ಆಂಧ್ರದ ಚುನಾವಣೆಗೆ ನಿಮ್ಮ ಬಾಬ್ತಿನಿಂದ ನಾಗೇಂದ್ರ ಎಷ್ಟು ಹಣ ವರ್ಗಾವಣೆ ಮಾಡಿದರು ?
ಮಹಾರಾಷ್ಟ್ರ ಚುನಾವಣಾ ಹೊತ್ತಿನಲ್ಲಿ ಇನ್ನು ಯಾವ ನಿಗಮಕ್ಕೆ ಕೊಳ್ಳೆ ಹೊಡೆಯೋಣ ಎಂದು ಚರ್ಚಿಸಲು ಆರೋಪಿ ನಾಗೇಂದ್ರನಿಂದ ಅಭಿನಂದನೆ ಹಾಗೂ ಸಲಹೆ ಪಡೆದಿರೇ ?
ವಾಲ್ಮೀಕಿ ಜನಾಂಗದ ಸಂವಿಧಾನ ಬದ್ಧ ಹಣವನ್ನು ನುಂಗಿ ನೀರು ಕುಡಿದ ಆರೋಪಿಯನ್ನು ವಾಲ್ಮೀಕಿ ಜಯಂತಿಯ ಹಿಂದಿನ ದಿನ ಆಲಂಗಿಸಿ ಅಕ್ಕರೆ ಸುರಿಸಿದ್ದು ಎಷ್ಟು ಸರಿ ಸಿದ್ದರಾಮಯ್ಯನವರೇ ಎಂದು ಸುನಿಲ್‌ ಕುಮಾರ್ ಪ್ರಶ್ನಿಸಿದ್ದಾರೆ.

 

 

Leave a Reply

Your email address will not be published. Required fields are marked *