Share this news

ಕಾರ್ಕಳ: ಲೋಕಸಭೆಯಲ್ಲಿ ಬಿಜೆಪಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಲ್ಲಿ ಸಂವಿಧಾನವನ್ನು ಬದಲಿಸುವುದಾಗಿ ಸಂಸದ ಅನಂತಕುಮಾರ್ ಹೆಗಡೆ ಹೇಳಿಕೆಯನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡು‌ ಇದೀಗ ಸಂವಿಧಾನದ ರಕ್ಷಣೆಯ ಮಾತುಗಳನ್ನಾಡುತ್ತಿರುವುದು ಹಾಸ್ಯಾಸ್ಪದ ಎಂದು ಕಾರ್ಕಳ ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಬೇಲಾಡಿ ಹೇಳಿದ್ದಾರೆ.
ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ರಾಜ್ಯದ ಜನತೆಗೆ ಕೊಟ್ಟ ಮಾತಿನಂತೆ ಐದು ಗ್ಯಾರಂಟಿ ಯೋಜನೆಗಳನ್ನು ಅಧಿಕಾರಕ್ಕೆ ಬಂದ ಕೂಡಲೇ ಜಾರಿಗೊಳಿಸಿದೆ. ರಾಜ್ಯಾದ್ಯಂತ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಅತ್ಯಂತ ಯಶಸ್ವಿಯಾಗಿ ಜಾರಿಯಾಗಿದ್ದು ಕಾಂಗ್ರೆಸ್ ಗ್ಯಾರಂಟಿಯ ಜನಪ್ರಿಯತೆಯಿಂದ ಬಿಜೆಪಿಯ ನಿದ್ದೆಗೆಡಿಸಿದೆ. ಬಿಜೆಪಿಯು ಆರಂಭದಿಂದಲೂ ಬಡವರಿಗೆ ನೀಡುವ ಕಾಂಗ್ರೆಸ್ ಗ್ಯಾರಂಟಿ ವಿರುದ್ದ ಟೀಕೆ ಮಾಡುತ್ತಾ ವಿರೋದಿಸುತ್ತಾ ಬಡವರ ಬಗ್ಗೆ ಕೇವಲವಾಗಿ ಮಾತನಾಡಿರುವ ವಿಚಾರವನ್ನು ರಾಜ್ಯದ ಜನರು ಗಮನಿಸುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳು ಮುಂದೆಯೂ ರಾಜ್ಯದ ಜನರಿಗೆ ಸಿಗಬೇಕಾದರೆ ಬಿಜೆಪಿಯನ್ನು ಲೋಕಸಭೆಯಲ್ಲಿ ಸೋಲಿಸುವುದು ಅನಿವಾರ್ಯವಾಗಿದೆ ಎಂದು ನಮ್ಮ ಪಕ್ಷದ ನಾಯಕರಾದ ಉದಯ ಕುಮಾರ್ ಶೆಟ್ಟಿ ಮುನಿಯಾಲು ಹೇಳಿರುವುದರಲ್ಲಿ ಯಾವುದೇ ತಪ್ಪಿಲ್ಲ.

ಕಾಂಗ್ರೆಸ್ ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವಲ್ಲಿ ಶ್ರಮಿಸುತ್ತಿದ್ದು ಬಿಜೆಪಿಯಿಂದ ಸಂವಿಧಾನಕ್ಕೆ ನಿಜವಾಗಿಯೂ ಅಪಾಯವಿದೆ. ನಾವು ಅಧಿಕಾರಕ್ಕೆ ಬಂದಿರುವುದೇ ದೇಶದ ಸಂವಿಧಾನವನ್ನು ಬದಲಾವಣೆ ಮಾಡಲು ಎಂದು ಬಿಜೆಪಿಯ ಸಂಸದ ಅನಂತಕುಮಾರ್ ಹೆಗಡೆಯವರು ಹೇಳಿದಾಗ ಕಾರ್ಕಳ ಬಿಜೆಪಿ ಬಾಯಿಮುಚ್ಚಿ ಕುಳಿತು ತನ್ನ ಮೌನ ಸಮ್ಮತಿಯನ್ನು ಸೂಚಿಸಿತ್ತು. ಬಿಜೆಪಿಯ ಇಂತಹ ಸಂವಿಧಾನ ವಿರೋಧಿ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷ ಖಂಡಿಸಿತ್ತು ಹಾಗೂ ಸಂವಿಧಾನಕ್ಕೆ ಬಿಜೆಪಿಯಿಂದಾಗುವ ಅಪಾಯಗಳ ಬಗ್ಗೆ ನಿರಂತರವಾಗಿ ಜನ ಜಾಗೃತಿ ಮೂಡಿಸಿತ್ತು. ಇದರ ಪರಿಣಾಮದಿಂದ ಇಂದು ಕಾರ್ಕಳ ಬಿಜೆಪಿಗೆ ಸಂವಿಧಾನದ ಮೇಲೆ ಕಾಳಜಿ ಬಂದಿದ್ದು ಬಿಜೆಪಿಯ ನಗರ ಅಧ್ಯಕ್ಷ ರವೀಂದ್ರ ಮೊಯ್ಲಿಯವರು ಸಂವಿಧಾನದ ಬಗ್ಗೆ ಅಪಾರ ಗೌರವ ವ್ಯಕ್ತಪಡಿಸುತ್ತಿದ್ದು, ಸಂವಿಧಾನದ ಬಗ್ಗೆ ಕಾಳಜಿಯನ್ನು ಮೂಡಿಸುವಲ್ಲಿ ಕಾರಣೀಭೂತರಾದ ಮುನಿಯಾಲು ಉದಯಕುಮಾರ್ ಶೆಟ್ಟಿಯವರನ್ನು ನಾನು ಅಭಿನಂದಿಸುತ್ತೇನೆ.

ಕ್ಷೇತ್ರದ ಜನರ ಸಮಸ್ಯೆಗಳಿಗೆ ಸಮರ್ಪಕವಾಗಿ ಸ್ಪಂದಿಸುತ್ತ, ಬಡ ಜನರ ಸೇವಯನ್ನು ನಿರಂತರವಾಗಿ ಮಾಡುತ್ತಾ, ದೈವ ದೇವಸ್ಥಾನಗಳ ಜೀರ್ಣೋದ್ದಾರದ ಕಾರ್ಯಗಳಿಗೆ ಸಹಕಾರವನ್ನು ನೀಡುತ್ತಿರುವ ದೈವಭಕ್ತ, ಧರ್ಮನಿಷ್ಠ ಉದಯಕುಮಾರ್ ಶೆಟ್ಟಿಯವರ ಜನಪ್ರಿಯತೆಯನ್ನು ಸಹಿಸಲಾಗದೆ ಅವರ ವಿರುದ್ದ ಸುಳ್ಳು ಆರೋಪವನ್ನು ಮಾಡಿ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ನೀಡಿದ್ದು ಕೈಲಾಗದವ ಮೈಪರಚಿಕೊಂಡ ಎನ್ನುವಂತಾಗಿದೆ ಎಂದು ಕಾರ್ಕಳ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಬೇಲಾಡಿ ವ್ಯಂಗ್ಯವಾಡಿದ್ದಾರೆ

 

 

Leave a Reply

Your email address will not be published. Required fields are marked *