ಹಾಸನ: ಹಾಸನದ ಪ್ರಸಿದ್ಧ ಹಾಸನಾಂಬ ದೇಗುಲದ ಬಾಗಿಲನ್ನು ನಾಳೆಯಿಂದ ತೆರೆಯಲಾಗುತ್ತದೆ. ನಾಳೆಯಿಂದ (ಅ.24) ನವೆಂಬರ್ 3ರವರೆಗೆ ತೆರೆದಿರುತ್ತದೆ. ವರ್ಷದಿಂದ ವರ್ಷಕ್ಕೆ ಹಲವು ಆಕರ್ಷಣೆಗಳೊಂದಿಗೆ ಗಮನ ಸೆಳೆಯುತ್ತಿರುವ ಹಾಸನಾಂಬೆ ಉತ್ಸವದಲ್ಲಿ ಈ ವರ್ಷ ದಸರಾ ಮಾದರಿಯ ದೀಪಾಲಂಕಾರ, ಇದೇ ಮೊದಲಬಾರಿಗೆ ಫಲಪುಷ್ಪ ಪ್ರದರ್ಶನ, ಹಾಟ್ ಏರ್ ಬಲೂನ್, ರಾಜ್ಯಮಟ್ಟದ ನೃತ್ಯ ಸ್ಪರ್ಧೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ.
ನಾಳೆ ಮದ್ಯಾಹ್ನ 12 ಗಂಟೆಗೆ ದೇಗುಲದ ಗರ್ಭಗುಡಿ ಬಾಗಿಲು ತೆರೆಯುತ್ತದೆ. ಕಳೆದ ಬಾರಿ 14 ಲಕ್ಷ ಭಕ್ತರು ದೇವಿಯ ದರ್ಶನ ಪಡೆದಿದ್ದರು. ಈ ವರ್ಷ ಸುಮಾರು 20 ರಿಂದ 25 ಲಕ್ಷ ಭಕ್ತರು ಬರುವ ನಿರೀಕ್ಷೆಯಲ್ಲಿ ಜಿಲ್ಲಾಡಳಿತ ಇದ್ದು, ಇದಕ್ಕಾಗಿ ಭರ್ಜರಿ ತಯಾರಿ ನಡೆಸಿದೆ. ದೇಗುಲವನ್ನು ಆಕರ್ಷಕವಾಗಿ ಅಲಂಕಾರ ಮಾಡಲಾಗಿದ್ದು ದೇಗುಲದ ಆವರಣದಲ್ಲಿ ಭಕ್ತರ ದರ್ಶನಕ್ಕಾಗಿ ಸರತಿ ಸಾಲುಗಳ ಬ್ಯಾರಿಕೇಡ್, ಸಾಂಪ್ರದಾಯಿಕ ಮಾದರಿಯ ಮಾಡೆಲ್‌ಗಳು, ಮಳೆ, ಬಿಸಿಲಿನಿಂದ ರಕ್ಷಣೆಗಾಗಿ ಟೆಂಟ್ ಮತ್ತು ದೊನ್ನೆ ಪ್ರಸಾದ ವಿತರಣೆಗೂ ವ್ಯವಸ್ಥೆ ಮಾಡಲಾಗಿದೆ.
ಹಾಸನದಲ್ಲಿ ಹುತ್ತದ ರೂಪದಲ್ಲಿ ನೆಲೆಸಿರುವ ಶಕ್ತಿದೇವತೆ ಹಾಸನಾಂಬೆ ದೇಗುಲದಲ್ಲಿ ದೇವಿ ದರ್ಶನ ಸಿಗುವುದು ವರ್ಷಕ್ಕೆ ಒಮ್ಮೆ ಮಾತ್ರ. ಪ್ರತೀ ವರ್ಷ ಅಶ್ವಯುಜ ಮಾಸದ ಅಷ್ಟಮಿಯ ಗುರುವಾರ ದೇಗುಲದ ಬಾಗಿಲು ತೆರೆಯಲಾಗುತ್ತೆ. ಈ ವರ್ಷ ಅಕ್ಟೋಬರ್ 24ರ ಮದ್ಯಾಹ್ನ ದೇಗುಲದ ಬಾಗಿಲು ತೆರೆದರೆ ನವೆಂಬರ್ 3ಕ್ಕೆ ಮದ್ಯಾಹ್ನ 12ಕ್ಕೆ ಗರ್ಭಗುಡಿ ಬಾಗಿಲನ್ನು ಮುಚ್ಚಲಾಗುತ್ತೆ.
ಒಟ್ಟು 11 ದಿನ ದೇಗುಲದ ಬಾಗಿಲು ತೆರೆದಿರಲಿದೆ. ಆದರೆ 9 ದಿನಗಳು ಮಾತ್ರ ಭಕ್ತರ ದರ್ಶನಕ್ಕೆ ಅವಕಾಶ ಸಿಗಲಿದೆ. ದಿನದ 24 ಗಂಟೆಗಳೂ ಕೂಡ ದೇವಿಯ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ಭಕ್ತರಿಗೆ ದರ್ಶನಕ್ಕೆ ಬೇಕಾದ ವಿಶೇಷ ವ್ಯವಸ್ಥೆ ಮಾಡಲಾಗಿದೆ. ನೇರ ದರ್ಶನ ಪಡೆಯ ಬಯಸುವ ಭಕ್ತರಿಗೆ 1000 ರೂ. ಟಿಕೆಟ್ 300 ರೂ. ಟಿಕೆಟ್ ಹಾಗೂ ವಿಶೇಷ ಗಣ್ಯರ ದರ್ಶನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಹಾಗೂ ಸಾಮಾನ್ಯ ಭಕ್ತರ ದರ್ಶನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.