ಕಾರ್ಕಳ:ಕಳೆದ 2019ರ ಜಾನುವಾರು ಗಣತಿಯ ಆಧಾರದಲ್ಲಿ ಜಾನುವಾರುಗಳ ಸಂಖ್ಯೆ ಕಡಿಮೆ ಇರುವ ಪ್ರದೇಶದ ಪಶು ಚಿಕಿತ್ಸಾಲಯ ಮತ್ತು ಆಸ್ಪತ್ರೆಗಳನ್ನು ಮುಚ್ಚಲು ರಾಜ್ಯ ಸರಕಾರ ನಿರ್ಧಾರ ತೆಗೆದುಕೊಂಡಿದ್ದು ಈಗಾಗಲೇ ಈ ಬಗ್ಗೆ ಕ್ರಮ ಕೈಗೊಳ್ಳಲು ಸಿದ್ಧತೆಯನ್ನು ನಡೆಸುತ್ತಿದೆ. ಸರಕಾರದ ಜನ ವಿರೋಧಿ ನಡೆ ಖಂಡನೀಯ ಎಂದು ಸಹಕಾರ ಭಾರತಿ ರಾಜ್ಯ ಹಾಲು ಪ್ರಕೋಷ್ಟದ ಸಂಚಾಲಕ ಸಾಣೂರು ನರಸಿಂಹ ಕಾಮತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದೆರಡು ವರ್ಷಗಳಿಂದ ರಾಜ್ಯದ ಹೈನುಗಾರರು ಏರುತ್ತಿರುವ ಉತ್ಪಾದನಾ ವೆಚ್ಚದಿಂದ, ಹೈನುಗಾರಿಕೆಯಲ್ಲಿ ತೀರಾ ನಷ್ಟವನ್ನು ಅನುಭವಿಸುತ್ತಿದ್ದು, ಈಗಾಗಲೇ ನೂರಾರು ಗ್ರಾಮೀಣ ಭಾಗದ ಕುಟುಂಬಗಳು ಹೈನುಗಾರಿಕೆಯಿಂದ ವಿಮುಖರಾಗುತ್ತಿದ್ದಾರೆ.ಪಶು ವೈದ್ಯರ ಕೊರತೆಯಿಂದ, ಸಕಾಲದಲ್ಲಿ ಪಶುಗಳಿಗೆ ಚಿಕಿತ್ಸೆಯನ್ನು ಒದಗಿಸಲಾಗದೇ ಸಂಕಟಪಡುತ್ತಿರುವ ಹೈನುಗಾರರಿಗೆ ಇದೀಗ ಹತ್ತಿರದಲ್ಲೇ ಲಭ್ಯವಿರುವ ಪಶು ಚಿಕಿತ್ಸಾಲಯಗಳನ್ನು ಮುಚ್ಚಿದರೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ. ಕಳೆದ ವಾರವಷ್ಟೇ ಪ್ರತಿ ಟನ್ ಪಶು ಆಹಾರಕ್ಕೆ ರೂಪಾಯಿ 500 ಹೆಚ್ಚಳ ಮಾಡಿದ್ದು ಹಾಗೂ 6 ತಿಂಗಳಿನಿಂದ ಪ್ರೋತ್ಸಾಹ ಧನ ಬಿಡುಗಡೆಯಾಗದೇ ಹೈನುಗಾರರು ಖರ್ಚು ವೆಚ್ಚಗಳನ್ನು ಹೊಂದಿಸಿಕೊಳ್ಳಲು ಪರದಾಡುತ್ತಿದ್ದು ಈ ನಡುವೆ ರೈತವಿರೋಧಿ ಕೈಗೊಂಡಿರುವುದು ಖಂಡನೀಯ ಎಂದಿದ್ದಾರೆ.
ಹಾಲಿ ಪಶುಚಿಕಿತ್ಸಾ ಕೇಂದ್ರಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಪಶು ವೈದ್ಯರು ಹಾಗೂ ಸಿಬ್ಬಂದಿಗಳನ್ನು ಭರ್ತಿಗೊಳಿಸಬೇಕು. ಏರುತ್ತಿರುವ ಪಶು ಆಹಾರ ದರವನ್ನು ಸರಿದೂಗಿಸಲು ನಂದಿನಿ ಪಶು ಆಹಾರಕ್ಕೆ ಪ್ರತೀ ಕೆಜಿಗೆ ಕನಿಷ್ಠ 5 ರೂಪಾಯಿ ಸಬ್ಸಿಡಿ ನೀಡಬೇಕು.ಬಾಕಿ ಉಳಿಸಿಕೊಂಡಿರುವ ಹಾಲಿನ ಪ್ರೋತ್ಸಾಹ ಧನವನ್ನು ಏಕಗಂಟಿನಲ್ಲಿ ಬಿಡುಗಡೆಗೊಳಿಸಬೇಕು, ಕಳೆದ ಬಜೆಟ್ ನಲ್ಲಿ ಘೋಷಿಸಿದ್ದ ಪ್ರೋತ್ಸಾಹ ಧನವನ್ನು 5ರಿಂದ 7 ರೂಪಾಯಿಗೆ ಏರಿಸುತ್ತೇವೆಂದು ಭರವಸೆ ನೀಡಿದ್ದರು.ಇದನ್ನು ಕನಿಷ್ಠ 10 ರೂಪಾಯಿಗೆ ಏರಿಸಿದರೆ ಮಾತ್ರ ರಾಜ್ಯದಲ್ಲಿ ಹೈನುಗಾರಿಕೆ ಉಳಿಯಲು ಸಾಧ್ಯವಿದೆ ಎಂದು ನರಸಿಂಹ ಕಾಮತ್ ಒತ್ತಾಯಿಸಿದ್ದಾರೆ.
ಹೈನುಗಾರಿಕೆ ಉದ್ಯಮ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಹಾಲು ಸಂಗ್ರಹಣೆ ಕಡಿಮೆಯಾಗುತ್ತಿದ್ದು ಇದರಿಂದ ಹಾಲು ಉತ್ಪಾದಕರ ಸಂಘದ ಸಿಬ್ಬಂದಿಗಳ ವೇತನ ಪಾವತಿಗೂ ಕಷ್ಟವಾಗುತ್ತಿದೆ,ಆದ್ದರಿಂದ ರಾಜ್ಯದ ಹೈನುಗಾರರು ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳ ಬಗ್ಗೆ ಸಮಗ್ರವಾಗಿ ಪರಿಶೀಲಿಸಿ, ತುರ್ತು ಆರ್ಥಿಕ ನೆರವು ಮತ್ತು ಪ್ರೋತ್ಸಾಹಕ ಯೋಜನೆಗಳನ್ನು ರೂಪಿಸಬೇಕೆಂದು ಸಾಣೂರು ನರಸಿಂಹ ಕಾಮತ್ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಗ್ರಾಮ ಲೆಕ್ಕಿಗರ ನೇಮಕಾತಿ 2024: ಕರ್ನಾಟಕ ಕಂದಾಯ ಇಲಾಖೆಯ ಮೂಲಕ 1000 ಗ್ರಾಮ ಲೆಕ್ಕಿಗರ (VA) ಖಾಲಿ ಹುದ್ದೆಗಳಿಗೆ ಈಗಲೇ ಅರ್ಜಿ ಸಲ್ಲಿಸಿ.