Share this news

ಬೆಳ್ತಂಗಡಿ, ಸೆ,29: ರಾಜ್ಯದಲ್ಲಿ ಮಲೆಕುಡಿಯ ಸಮುದಾಯದ ಜನರು ಒಗ್ಗೂಡುವ ಜೊತೆಗೆ ಆದಿವಾಸಿ ಸಂಘಟನೆಯನ್ನು ಬಲಿಷ್ಠಗೊಳಿಸಿ ತಮ್ಮ ಹಕ್ಕಿಗಾಗಿ ಸಂವಿಧಾನದಡಿ ಹೊಸ ಮಾದರಿಯಲ್ಲಿ ಹೋರಾಟವನ್ನು ರೂಪಿಸಬೇಕಾದ ಅನಿವಾರ್ಯತೆಯಿದೆ ಎಂದು ಮಲೆಕುಡಿಯ ಸಂಘದ ರಾಜ್ಯಾಧ್ಯಕ್ಷ ಶ್ರೀಧರ ಗೌಡ ಈದು ಅಭಿಪ್ರಾಯಪಟ್ಟರು.
ಅವರು ಬೆಳ್ತಂಗಡಿ ಕೊಯ್ಯುರು ಶಿವಗಿರಿ ಮಲೆಕುಡಿಯ ಸಮುದಾಯ ಭವನದಲ್ಲಿ ಕರ್ನಾಟಕ ರಾಜ್ಯ ಮಲೆಕುಡಿಯ ಸಂಘ ಹಾಗೂ ಕೇರಳ ರಾಜ್ಯ ಅಖಿಲ ಕೇರಳ ಮಲೆಕುಡಿಯ ಸೇವಾ ಸಂಘ ಧರ್ಮಡ್ಕ (ರಿ)ಇವುಗಳ ಆಶ್ರಯದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಜ್ಯ ಸರ್ಕಾರದಿಂದ ನಡೆಸಲ್ಪಡುತ್ತಿರುವ ಸಾಮಾಜಿಕ, ಶೈಕ್ಷಣಿಕ ಗಣತಿ, ಉಭಯ ರಾಜ್ಯಗಳಲ್ಲಿನ ಜಾತಿ ಪ್ರಮಾಣ ಪತ್ರದಲ್ಲಿರುವ ಲೋಪ ದೋಷಗಳು, ಅರಣ್ಯ ಹಕ್ಕು ಪತ್ರ ಪಡೆದವರಿಗೆ ಸರ್ಕಾರಿ ಸೌಲಭ್ಯ, ಸಮುದಾಯದ ಕುಲಶಾಸ್ತ್ರ ಅಧ್ಯಯನ, ಪೌಷ್ಟಿಕ ಆಹಾರ ವಿತರಣೆ ಸೇರಿದಂತೆ ಇನ್ನಿತರ ಹತ್ತು ಹಲವು ವಿಷಯಗಳ ಬಗ್ಗೆ ಸುಧೀರ್ಘವಾಗಿ ಚರ್ಚಿಸಿ, ರಾಜ್ಯದ ಬೇರೆ ಬೇರೆ ಕಡೆ ಮಲೆಕುಡಿಯರಿಗೆ ಮೆಲಕುಡಿ ,ಕುಡಿಯ, ಮಲೈಕುಡಿ ಎಂಬುದಾಗಿ ಜಾತಿ ಪ್ರಮಾಣ ಪತ್ರ ನೀಡಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಏಕರೂಪದಲ್ಲಿ ಅಂದರೆ ಮಲೆಕುಡಿಯ ಎಂಬ ಹೆಸರಿನಡಿ ಕೇರಳ ಹಾಗೂ ಕರ್ನಾಟಕದಲ್ಲಿ ಜಾತಿ ಪ್ರಮಾಣ ಪತ್ರ ನೀಡಬೇಕು ಎಂದು ಸರ್ಕಾರವನ್ನು ಆಗ್ರಹಿಸುವ ಬಗ್ಗೆ ಒಮ್ಮತದ ತೀರ್ಮಾನಕ್ಕೆ ಬರಲಾಯಿತು. ಇದೀಗ ನಡೆಸುತ್ತಿರುವ ಸಾಮಾಜಿಕ ಶೈಕ್ಷಣಿಕ ಜಾತಿ ಸಮೀಕ್ಷೆಯ ಯಲ್ಲಿ ಸಮುದಾಯದ ಕುಲಕಸುಬು ಕಿರು ಅರಣ್ಯ ಉತ್ಪನ್ನ ಸಂಗ್ರಹ ಎಂದು ನಮೂದಿಸ ಬೇಕೆಂದು ತೀರ್ಮಾನಿಸಲಾಯಿತು. ಅರಣ್ಯ ಹಕ್ಕು ಪತ್ರ ಪಡೆದವರಿಗೆ ಸರ್ಕಾರದ ಎಲ್ಲಾ ಸೌಲಭ್ಯಗಳು ದೊರಕಬೇಕೆನ್ನುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಸಂಘದ ಮುಖೇನ ಹೋರಾಟ ಮಾಡುವ ಬಗ್ಗೆ ತೀರ್ಮಾನಿಸಲಾಯಿತು. ಅರಣ್ಯ ಇಲಾಖೆಯಲ್ಲಿ ಸ್ಥಳೀಯ ಅರಣ್ಯ ಬುಡಕಟ್ಟುಗಳಿಗೆ ಉದ್ಯೋಗ ಮೀಸಲಾತಿ ನೀಡಿದಂತೆ ಸರ್ಕಾರದ ಇತರ ಇಲಾಖೆಗಳಲ್ಲಿ ಕೂಡ ನೀಡಬೇಕೆನ್ನುವ ದೃಷ್ಟಿಯಲ್ಲಿ ಈಗಾಗಲೇ ಸಂಘಟನೆ ಹೋರಾಟವನ್ನು ಮಾಡಿದ್ದು ಈ ಹೋರಾಟವನ್ನು ಮತ್ತಷ್ಟು ಗಟ್ಟಿಗೊಳಿಸುವ ಬಗ್ಗೆ ತೀರ್ಮಾನಿಸಲಾಯಿತು. ಕಳಪೆ ಪೌಷ್ಟಿಕ ಆಹಾರವನ್ನು ಇತ್ತೀಚಿನ ದಿನಗಳಲ್ಲಿ ನೀಡುತ್ತಿದ್ದು ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ದೂರು ನೀಡುವ ಬಗ್ಗೆ ತೀರ್ಮಾನಿಸಲಾಯಿತು. ಕುಲಶಾಸ್ತ್ರ ಅಧ್ಯಯನದ ವಿಷಯಕ್ಕೆ ಸಂಬಂಧಪಟ್ಟಂತೆ ಚಿಕ್ಕಮಗಳೂರು, ಕೊಡಗು, ದಕ್ಷಿಣ ಕನ್ನಡ ,ಉಡುಪಿ, ಹಾಸನ ಜಿಲ್ಲೆಗಳಲ್ಲಿ ಪ್ರತ್ಯೇಕ ಸಭೆಗಳನ್ನು ನಡೆಸುವ ಬಗ್ಗೆ ನಿರ್ಣಯಿಸಲಾಯಿತು. ಮುಂಬರುವ ಡಿಸೆಂಬರ್ ತಿಂಗಳಲ್ಲಿ ರ್ರಾಜ್ಯ ಸಂಘದ ಪುನರ್ ರಚನಾ ಸಭೆ ನಡೆಸುವ ಬಗ್ಗೆ ತೀರ್ಮಾನಿಸಲಾಯಿತು. ಚಿಕ್ಕಮಗಳೂರು ಕಾಸರಗೋಡು, ದ.ಕ, ಉಡುಪಿ ಜಿಲ್ಲೆಯಿಂದ ಭಾಗವಹಿಸಿದ ಎಲ್ಲಾ ಪದಾಧಿಕಾರಿಗಳು ಚರ್ಚೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಪ್ರಧಾನ ಕಾರ್ಯದರ್ಶಿ . ಬಾಲಕೃಷ್ಣ.ಕೆ ಪೊಳಲಿ ಕಾರ್ಯಕ್ರಮ ನಿರ್ವಹಿಸಿದರು, ಕುಮಾರಿ ಕ್ರಪಾ ಪ್ರಾರ್ಥಿಸಿ, ಉಪಾಧ್ಯಕ್ಷೆ ವಸಂತಿ ಸ್ವಾಗತಿಸಿ, ಕೋಶಾಧಿಕಾರಿ ಶಿವರಾಮ ವರದಿವಾಚಿಸಿದರು. ದ .ಕ ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಜಯಂದ್ರ ನಿಡ್ಲೆ ಧನ್ಯವಾದವಿತ್ತರು. ಕೇರಳ ಸಂಘದ ಅಧ್ಯಕ್ಷ ಶಂಕರಗೌಡ,ಉಡುಪಿ ಜಿಲ್ಲಾಧ್ಯಕ್ಷ ಗಂಗಾಧರ ಗೌಡ, ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಗೋಪಾಲ ಉಪಸ್ಥಿತರಿದ್ದರು

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *