Share this news

ಕಾರ್ಕಳ : ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಜಾರ್ಕಳ ಮುಂಡ್ಲಿಯಲ್ಲಿ ಕಳೆದ ಜ. 14ರಂದು ಶ್ರೀ ಈಶ್ವರ ಯಕ್ಷಗಾನ ಸಂಘದ ವತಿಯಿಂದ ನಡೆಯುತ್ತಿದ್ದ ಯಕ್ಷಗಾನ‌ ಪ್ರದರ್ಶನಕ್ಕೆ ತಡೆಯೊಡ್ಡಿ ಆಯೋಜಕರು ಹಾಗೂ ಇತರರ ವಿರುದ್ಧ ಅಜೆಕಾರು ಪೊಲೀಸರು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ಯಕ್ಷಗಾನ ಆಯೋಜನೆಗೆ ಸ್ಥಳೀಯ ಪಂಚಾಯತ್‌ ಪಿಡಿಓ ಹಾಗೂ ಧ್ವನಿವರ್ಧಕ ಬಳಕೆಗೆ ಪೊಲೀಸ್‌ ಇಲಾಖೆಯಿಂದ ಅನುಮತಿ ಪಡೆದಿಲ್ಲ ಎನ್ನುವ ಕಾರಣದಿಂದ ಅಜೆಕಾರು ಪೊಲೀಸ್‌ ಠಾಣೆಯಲ್ಲಿ ಕಾರ್ಯಕ್ರಮ ಆಯೋಜಕರಾದ
ಈಶ್ವರ ಯಕ್ಷಗಾನ ಸಂಘದ ಅಧ್ಯಕ್ಷ ಸದಾನಂದ ಶೆಟ್ಟಿ, ಅಜೆಕಾರು ಮಹಾಲಕ್ಷ್ಮೀ ಸೌಂಡ್ಸ್‌ ಮಾಲಕ ಅಪ್ಪು ನಾಯಕ್‌, ಮನೋಜ್‌ ಶೆಟ್ಟಿ, ಪ್ರಜ್ವಲ್‌ ಜೈನ್‌ ಹಾಗೂ ಆದರ್ಶ ಜೈನ್‌ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಜು. 22ರಂದು ಪ್ರಕರಣಕ್ಕೆ ತಾತ್ಕಾಲಿಕವಾಗಿ ತಡೆ ನೀಡಿದೆ. ಈ‌ ಮೂಲಕ ಪೊಲೀಸರಿಗೆ ತೀವ್ರ ಮುಖಭಂಗವಾದಂತಾಗಿದೆ.
ಈ ಪ್ರಕರಣದ ಕುರಿತು ನ್ಯಾಯವಾದಿ ಮಹೇಂದ್ರ. ಎಸ್‌. ಎಸ್ ಅವರ ವಾದ ಮಂಡಿಸಿದರು.
ಈ ಪ್ರಕರಣದ ಕುರಿತು ವಿಧಾನಸಭಾ ಅಧಿವೇಶನ ಸಂದರ್ಭದಲ್ಲಿ ಕಾರ್ಕಳ ಶಾಸಕ ಸುನಿಲ್‌ ಕುಮಾರ್‌ ಅವರು ಯಕ್ಷಗಾನ ಮತ್ತು ಇತರ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳಿಗೆ ಇರುವ ಕಾನೂನುಗಳನ್ನು ಸರಳೀಕರಣಗೊಳಿಸಬೇಕೆಂದ ಗೃಹ ಸಚಿವರ ಗಮನ ಸೆಳೆದಿದ್ದರು. ಆಗ ಇದು ರಾಜ್ಯವ್ಯಾಪಿ ಸುದ್ದಿಯಾಗಿತ್ತು.
ರಾಜಕೀಯ ಪಕ್ಷದ ವ್ಯಕ್ತಿಯಿಂದ ಗ್ರಾಮದ ಕಾರ್ಯಕ್ರಮ ಹಾಳು ಮಾಡಲು ಪೊಲೀಸರಿಗೆ ದೂರು ನೀಡಿದ್ದರು ಎಂಬುದು ಗ್ರಾಮಸ್ಥರ ಆರೋಪವಾಗಿದೆ. ನ್ಯಾಯಾಲಯದ ತಡೆಯಾಜ್ಞೆಯಿಂದ ಗ್ರಾಮಸ್ಥರು ಸಂತಸಗೊಂಡಿದ್ದಾರೆ.

 

 

Leave a Reply

Your email address will not be published. Required fields are marked *