ಕಾರ್ಕಳ: ಶನಿವಾರ ತಡರಾತ್ರಿ ಅಜೆಕಾರು, ಅಂಡಾರು, ದೆಪ್ಪುತೆ, ಬೊಂಡುಕುಮೇರಿ, ಶಿರ್ಲಾಲು ಪರಿಸದಲ್ಲಿ ಬೀಸಿದ ಬಿರುಗಾಳಿ ಸಹಿತ ಭಾರೀ ಗಾಳಿ ಮಳೆಗೆ ಮನೆಗಳಿಗೆ ಹಾಗೂ ಅಡಿಕೆ ತೋಟಗಳಿಗೆ ಅಪಾರ ಹಾನಿ ಸಂಭವಿಸಿದೆ.
ಅಜೆಕಾರು ವ್ಯವಸಾಯಿಕ ಸಹಕಾರಿ ಸಂಘದ ಕಟ್ಟಡದ ಕಬ್ಬಿಣದ ಇಡೀ ಮೇಲ್ಛಾವಣಿಯೇ ಗಾಳಿಯ ರಭಸಕ್ಕೆ ಹಾರಿಹೋಗಿದೆ. ವಿಷ್ಣುಮೂರ್ತಿ ದೇವಸ್ಥಾನದ ಸಭಾಭವನದ ಛಾವಣಿಗೆ ಭಾರೀ ಗಾತ್ರದ ಮರಬಿದ್ದು ಸುಮಾರು 30ಕ್ಕೂ ಅಧಿಕ ಸಿಮೆಂಟ್ ಶೀಟ್ ಪುಡಿಯಾಗಿದೆ. ಅಂಡಾರು ಗ್ರಾಮದಲ್ಲಿಯೂ ಕೂಡ ಬಿರುಗಾಳಿ ಹೊಡೆತಕ್ಕೆ ಹಲವು ಮನೆಗಳಿಗೆ ಹಾನಿಯಾಗಿದೆ. ಅಂಡಾರು ಕೊಂದಲ್ಕೆ ಶಿವರಾಮ ಶೆಟ್ಟಿಯವರ ಮನೆಯ ಛಾವಣೆಯ ಶೀಟ್ ಹಾರಿಗೋಗಿದ್ದು ಅಪಾರ ನಷ್ಟ ಸಂಭವಿಸಿದೆ. ಪ್ರದೀಪ್ ಶೆಟ್ಟಿ, ಅಚ್ಯುತ ಪ್ರಭು, ವಸಂತ ರಾವ್, ಶಕುಂತಳಾ ಆಚಾರ್ಯ, ಶೇಖರ ಸಾಲ್ಯಾನ್, ರವಿ ಶೆಟ್ಟಿಗಾರ್, ಸಂತೋಷ್ ಶೆಟ್ಟಿಗಾರ್ ಮನೆಯ ಛಾವಣಿಯ ಹೆಂಚು ಹಾಗೂ ಸಿಮೆಂಟ್ ಶೀಟ್ ಹಾರಿ ಹೋಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.