ಬೆಂಗಳೂರು: ಲೋಕಸಭೆ ಚುನಾವಣೆಗೆ ಮುನ್ನವೇ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ಕಾಂಗ್ರೆಸ್ನ ಹಿರಿಯ ನಾಯಕ ತನ್ವೀರ್ ಸೇಠ್, ಪಕ್ಷದ ಭವಿಷ್ಯ ಬಿಜೆಪಿಗಿಂತ ಉತ್ತಮವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದು, 28 ಕ್ಷೇತ್ರಗಳ ಪೈಕಿ 18-20 ರಿಂದ ಸ್ಥಾನಗಳನ್ನು ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮತ್ತು ಅದರ ಸಂಸದರ ವಿರುದ್ಧ ಪ್ರಬಲವಾದ ಆಡಳಿತ ವಿರೋಧಿ ಅಲೆಯಿರುವುದನ್ನು ನಾನು ಗಮನಿಸಿದ್ದೇನೆ. ಅದಕ್ಕಾಗಿಯೇ ಪಕ್ಷವು ತನ್ನ 12 ಹಾಲಿ ಸಂಸದರಿಗೆ ಟಿಕೆಟ್ ನಿರಾಕರಿಸಿದೆ. ಮೋದಿ ಮತ್ತು ಅಮಿತ್ ಶಾ ಪ್ರಚಾರಕ್ಕೆ ಬಂದರೆ ನಮ್ಮ (ಕಾಂಗ್ರೆಸ್) ಪಕ್ಷದ ಕಾರ್ಯಕರ್ತರು ಶ್ರಮವಹಿಸಿ ಕೆಲಸ ಮಾಡಲು ಪ್ರೇರೇಪಿಸುತ್ತದೆ’ ಎಂದು ಪಕ್ಷದ ಅಲ್ಪಸಂಖ್ಯಾತರ ಘಟಕ ಮತ್ತು ಮೈಸೂರು ಭಾಗದ ಉಸ್ತುವಾರಿಯಾಗಿರುವ ಸೇಠ್ ಹೇಳಿದರು.
ಮೈಸೂರಿನ ರಾಜಮನೆತನದ ಒಡೆಯರ್ ಕುಟುಂಬದ ಬಗ್ಗೆ ಗೌರವವಿದ್ದರೂ, ಕಾಂಗ್ರೆಸ್ ಯದುವೀರ್ ಒಡೆಯರ್ ಅವರನ್ನು ಎದುರಾಳಿಯಾಗಿ ನೋಡುತ್ತಿದೆ ಎಂದು ಸ್ಪಷ್ಟಪಡಿಸಿದ ಅವರು, ಈ ಹಿಂದೆಯೂ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಚುನಾವಣೆಯಲ್ಲಿ ಗೆದ್ದಿರುವುದು ಮತ್ತು ಸೋತಿರುವುದನ್ನು ನಾವು ನೋಡಿದ್ದೇವೆ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಎಂ ಲಕ್ಷ್ಮಣ ಅವರು ಬಿಜೆಪಿಯ ಅನಾಚಾರಗಳನ್ನು ಬಯಲಿಗೆಳೆದು ಜನಪರ ಹೋರಾಟ ನಡೆಸಿದ್ದು, ಸಂಸತ್ತಿನಲ್ಲಿ ಜನರ ಧ್ವನಿಯಾಗಬಹುದು. ಈ ಬಾರಿ ಮೈಸೂರಿನಲ್ಲಿ ಬದಲಾವಣೆ ಆಗಬಹುದು ಎಂಬ ಭರವಸೆ ಮೂಡಿಸಿದ್ದಾರೆ. ಕಳೆದ ಎರಡು ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವು ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರಿಗೆ ಬೆಂಬಲ ನೀಡಿದ್ದರಿಂದ ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಕ್ಷೇತ್ರದಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ ಎಂದು ಅವರು ಹೇಳಿದರು.
‘ಅಯೋಧ್ಯೆಯಲ್ಲಿ ರಾಮ ಮಂದಿರದ ಶಂಕುಸ್ಥಾಪನೆಯ ನಂತರ ಅದರ ಅಲೆ ಇತ್ತು ಎಂದು ನಾನು ಭಾವಿಸುವುದಿಲ್ಲ. ಏಕೆಂದರೆ, ಬಿಜೆಪಿ ಯಾವಾಗಲೂ ಭಾವನಾತ್ಮಕ ಮತ್ತು ಧಾರ್ಮಿಕ ವಿಷಯಗಳೊಂದಿಗೆ ಆಟವಾಡುತ್ತಿದೆ. ಎಲ್ಲೆಲ್ಲೂ ರಾಮಮಂದಿರವನ್ನು ನಾವು ಹೊಂದಿದ್ದೇವೆ. ಆದರೆ, ಸೀತೆ, ಲಕ್ಷ್ಮಣ ಮತ್ತು ಹನುಮಂತ ಇಲ್ಲದಿದ್ದರೆ ಅವು ಅಪೂರ್ಣ. ಬಿಜೆಪಿಯವರು ಅಪೂರ್ಣ ದೇವಸ್ಥಾನವನ್ನು ಉದ್ಘಾಟಿಸಿದರು.ನಮ್ಮಲ್ಲಿ ಆರ್ಥಿಕತೆ, ಹಣದುಬ್ಬರ ಮತ್ತು ದುರಾಡಳಿತ ಸೇರಿದಂತೆ ಇತರ ಜ್ವಲಂತ ಸಮಸ್ಯೆಗಳಿವೆ. ಈ ವಿಷಯಗಳ ಬಗ್ಗೆ ನಾವು ಕಾರ್ಯಸೂಚಿಯನ್ನು ಹೊಂದಿಸುತ್ತೇವೆ. ಭಾರತದ ಸಂವಿಧಾನವು ಅಪಾಯದಲ್ಲಿದೆ’ ಎಂದು ಅವರು ಹೇಳಿದರು.