ಕಾರ್ಕಳ: ಮಗುವಿನ ಪಾಲನೆಯಿಂದ ಕೆಲಸಕ್ಕೆ ಹೋಗಲು ಆಗುತ್ತಿಲ್ಲ ಎನ್ನುವ ಕೊರಗಿನಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಮಹಿಳೆಯೊಬ್ಬರು ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಾರ್ಕಳ ತಾಲೂಕು ಈದು ಗ್ರಾಮದ ಪ್ರಸನ್ನಾ (29) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಅವರಿಗೆ ಕಳೆದ ಎರಡು ವರ್ಷಗಳ ಹಿಂದೆ ಈದುವಿನ ರಾಜೇಶ್ ಎಂಬುವವರ ಜೊತೆ ಮದುವೆಯಾಗಿತ್ತು.ಮದುವೆಯ ಬಳಿಕ ಪ್ರಸನ್ನಾ ಹೊಸ್ಮಾರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಥಿತಿ ಶಿಕ್ಷಕಿಯಾಗಿ ಕೆಲಸ ಮಾಡಿಕೊಂಡಿದ್ದರು. ಪತಿ ರಾಜೇಶ್ ಬೆಂಗಳೂರಿನಲ್ಲಿ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದು, ಪ್ರಸನ್ನಾ ಮಗುವಾದ ಬಳಿಕ ಕೆಲಸ ಬಿಟ್ಟು ಮನೆಯಲ್ಲೇ ಇದ್ದರು.ಇದರಿಂದ ಶಾಲೆಗೆ ಹೋಗಲಾಗುತ್ತಿಲ್ಲ ಎನ್ನುವ ಕೊರಗಿನಿಂದ ನೊಂದಿದ್ದರು ಎನ್ನಲಾಗಿದೆ.
ಈ ನಡುವೆ ಪ್ರಸನ್ನಾ ಆಗಾಗ ತನ್ನ ತಾಯಿಗೆ ಕರೆಮಾಡಿ ನನಗೆ ಗಂಡನ ಮನೆಯವರು ಒಳ್ಳೆ ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ ನನಗೆ ಇಷ್ಟು ಬೇಗ ಮಗು ಬೇಡವಾಗಿತ್ತು ನಾನು ಕೆಲಸಕ್ಕೆ ಹೋಗಲು ಆಗುವುದಿಲ್ಲ ಎಂದು ಹೇಳುತ್ತಿದ್ದರು.ಇದೇ ಕಾರಣಕ್ಕೆ ಮಾನಸಿಕ ಖಿನ್ನತೆಗೊಳಗಾಗಿದ್ದ ಪ್ರಸನ್ನಾ ರವರು ಉಡುಪಿಯ ಬಾಳಿಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೂಡ ಪಡೆಯುತ್ತಿದ್ದರು.
ಆದರೆ ತಾನು ವಿದ್ಯಾಬ್ಯಾಸ ಮಾಡಿದ್ದರೂ ಮಗು ಆದ ಕಾರಣ ಕೆಲಸಕ್ಕೆ ಹೋಗಲು ಆಗುತ್ತಿಲ್ಲ ಎಂಬ ನೋವಿನಿಂದ ನ.06 ರಂದು ತನ್ನ ಗಂಡನ ಮನೆಯಲ್ಲಿ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
































































































