Share this news

ಬೆಂಗಳೂರು:ಬಳ್ಳಾರಿಯ ಹೊಸಪೇಟೆಯಲ್ಲಿ ರಾಜ್ಯ ಸರ್ಕಾರವು ಎರಡು ವರ್ಷಗಳ ಸಾಧನೆಗಳ ಕುರಿತು ಮಾಡಲು ಹೊರಟಿರುವ ಸಾಧನಾ ಸಮಾವೇಶದಲ್ಲಿ ಪ್ರೇತಕಳೆ ಎದ್ದು ಕಾಣಿಸುತ್ತಿದ್ದು,ಇದು ಸರ್ಕಾರದ ಸಾಧನೆಯ ಸಮಾವೇಶವಲ್ಲ ಸಿದ್ದರಾಮಯ್ಯನವರ ಅಧಿಕಾರ ತ್ಯಾಗದ ಸಮಾವೇಶವಾಗಿದೆ ಎಂದು ಮಾಜಿ ಸಚಿವ, ಶಾಸಕ ಸುನಿಲ್ ಕುಮಾರ್ ಲೇವಡಿ ಮಾಡಿದ್ದಾರೆ.
ಸಿದ್ದರಾಮಯ್ಯನವರ ಮಂತ್ರಿ ಮಂಡಲದ ಸಚಿವರ ಮುಖದಲ್ಲಿ ಕಿಂಚಿತ್ ಕಳೆಯಿಲ್ಲ.ಅಧಿಕಾರ ಬಿಟ್ಟು ಕೊಡಬೇಕು ಎನ್ನುವ ಆತಂಕ ಭಯ ಕಾಡುತ್ತಿದೆ. ಸಾಧನಾ ಸಮಾವೇಶದ ಬೆನ್ನಲ್ಲೇ ಸರ್ಕಾರದ ಕರಿಮಣಿ ಮಾಲೀಕತ್ವ ಕ್ಕಾಗಿ ಭೀಕರ ಕದನ ನಡೆಯಲಿದೆ ಎಂಬ ಚರ್ಚೆ ಕಾಂಗ್ರೆಸ್ ನ ಆಂತರಿಕ ವಲಯದಲ್ಲಿ ದಟ್ಟವಾಗಿದ್ದು ಕೊರಳಿಗೆ ಬೆರಳು ಬೀಳುವ ದಿನ ಹತ್ತಿರವಾಗುತ್ತಿದೆ. ಆದಾಗಿಯೂ ಎರಡು ವರ್ಷದಲ್ಲಿ ನಯ್ಯಾಪೈಸೆಯಷ್ಟೂ ಜನಪರ ಕೆಲಸ ಮಾಡದ ಈ “ದಂಡಪಿಂಡ” ಸರ್ಕಾರ ಸಾಧನಾ ಸಮಾವೇಶ ನಡೆಸುತ್ತಿರುವುದು ಜನಾದೇಶದ ಕ್ರೂರ ವ್ಯಂಗ್ಯವಾಗಿದೆ.ಏನೂ ಅಭಿವೃದ್ಧಿ ಕಾರ್ಯಗಳನ್ನು ಮಾಡದ ಸಿದ್ದರಾಮಯ್ಯನವರೇ ನೀವು ಈ ರೀತಿ ಸಂಭ್ರಮಿಸುವುದಾದರೂ ಏಕೆ ಎಂದು ಸುನಿಲ್ ಕುಮಾರ್ ಸಿಎಂ ಗೆ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಅಭಿವೃದ್ಧಿ ನಿಧಿಯನ್ನು ಸಕಾಲಕ್ಕೆ ಬಿಡುಗಡೆ ಮಾಡದೇ ರಾಜ್ಯದ ಬೆಳವಣಿಗೆಯ ದರವನ್ನು ಹತ್ತು ವರ್ಷ ಹಿಂದೆ ತಳ್ಳಿದಕ್ಕಾಗಿಯೇ?ಮರಣ ಪ್ರಮಾಣ ಪತ್ರದಿಂದ ಮೊದಲ್ಗೊಂಡು ಎಲ್ಲ ಸರ್ಕಾರಿ ಸೇವೆಗಳು ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಸಿದಕ್ಕಾಗಿಯೇ ?ಕೇಂದ್ರ ಸರ್ಕಾರದ ಜತೆ ಕಾಲು ಕೆದರಿ ಜಗಳಕ್ಕೆ ನಿಂತು ಕೇಂದ್ರ ಪ್ರಾಯೋಜಿತ ಕಾರ್ಯಕ್ರಮಗಳನ್ನು ಹಳ್ಳಹಿಡಿಸಿದಕ್ಕಾಗಿಯೇ ? ರಾಜ್ಯವನ್ನು ಜಾತಿ, ಧರ್ಮ, ಭಾಷೆಯ ಆಧಾರದ ಮೇಲೆ ತುಂಡು ಮಾಡುತ್ತಿರುವುದಕ್ಕಾಗಿಯೇ ? ಸರ್ವ ಜನಾಂಗದ ಶಾಂತಿಯ ತೋಟದ ಹೆಸರಿನಲ್ಲಿ ಹಿಂದೂ ಕಾರ್ಯಕರ್ತರ ರಕ್ತತರ್ಪಣ ಕೊಡುತ್ತಿರುವುದಕ್ಕಾಗಿಯೇ ? ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಹಾಕಿದವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿದಕ್ಕಾಗಿಯೇ ? ಜಾತಿ ಗಣತಿ ವರದಿಯಲ್ಲಿ ಪ್ರವರ್ಗ ಪರಿಷ್ಕರಣೆ ಮಾಡಿ ಹಿಂದುಳಿದ ವರ್ಗದ ಒಗ್ಗಟ್ಟು‌ ಒಡೆದಿದ್ದಕ್ಕಾಗಿಯೇ ? ದಲಿತರ ಮೀಸಲು ವರ್ಗೀಕರಣ ವಿಚಾರವನ್ನು ಇನ್ನಷ್ಟು ಜಟಿಲಗೊಳಿಸಿದಕ್ಕಾಗಿಯೇ? ಲೋಕಾಯುಕ್ತ ಸೇರಿದಂತೆ ಸ್ವಾಯತ್ತ ಸಂಸ್ಥೆಗಳನ್ನು ನುಂಗಿ- ನೀರು ಕುಡಿದಿದಕ್ಕಾಗಿಯೇ ? ಬೆಂಗಳೂರಿನ ಮೂಲ ಸೌಕರ್ಯ ವ್ಯವಸ್ಥೆಯನ್ನು ಸುರಂಗ ಮಾರ್ಗದಲ್ಲಿ ಸಮಾಧಿ ಮಾಡಿದಕ್ಕಾಗಿಯೇ ? ಭ್ರಷ್ಟಾಚಾರವನ್ನು ಶೇ100ಕ್ಕೆ ಹೆಚ್ಚಿಸಿದಕ್ಕಾಗಿಯೇ ?ಎಸ್ ಸಿಎಸ್ ಪಿ/ ಟಿಎಸ್ ಪಿ ಹಣವನ್ನು ದುರ್ಬಳಕೆ ಮಾಡಿಕೊಂಡಿದಕ್ಕಾಗಿಯೇ ?ಸಂವಿಧಾನ ಬಾಹಿರವಾಗಿ ಮುಸ್ಲಿಂರಿಗೆ ಸರ್ಕಾರಿ ಗುತ್ತಿಗೆ ಹಾಗೂ ಪೂರೈಕೆಯಲ್ಲಿ ಮೀಸಲು ಕಲ್ಪಿಸಿದಕ್ಕಾಗಿಯೇ ? ಮುಡಾ ಪ್ರಕರಣದ ಬಳಿಕ ಬೆಂಗಳೂರು ಬಿಟ್ಟು ರಾಜ್ಯ ಪ್ರವಾಸ ಮಾಡುವುದಕ್ಕೆ ಅಂಜುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನಿಮ್ಮ ಸರ್ಕಾರ ಈಗ “ಬೆಂಗಳೂರು- ಮೈಸೂರಿಗೆ” ಮಾತ್ರ ಸೀಮಿತವಾಗಿದೆ. ಅಭಿವೃದ್ಧಿ ಶೂನ್ಯವಾಗಿದೆ. ಇಂಥ ಸಂದರ್ಭದಲ್ಲಿ ಸಮಾವೇಶ ನಡೆಸಿ ಏನನ್ನು ಸಾಧಿಸುತ್ತೀರಿ ಎಂದು ಸಿಎಂ ಸಿದ್ದುಗೆ ಸುನಿಲ್ ಕುಮಾರ್ ಪ್ರಶ್ನಿಸಿದ್ದಾರೆ.

 

 

 

 

Leave a Reply

Your email address will not be published. Required fields are marked *