Share this news

ಬಾರ್ಬಡೊಸ್: ಅಂತಿಮ ಕ್ಷಣದ ವರೆಗೂ ಕ್ರಿಕೆಟ್ ಅಭಿಮಾನಿಗಳನ್ನು ಅಕ್ಷರಶಃ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಟ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ರೋಚಕವಾಗಿ ಮಣಿಸಿದ ಟೀಂ ಇಂಡಿಯಾ ಎರಡನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಕ್ರಿಕೆಟ್ ಜಗತ್ತಿನ ಅತಿದೊಡ್ಡ ಚೋಕರ್ಸ್ ಎಂದು ಟೀಕೆಗೆ ಗುರಿಯಾಗಿದ್ದ ದಕ್ಷಿಣ ಆಫ್ರಿಕಾ ತಂಡ ಮತ್ತೊಮ್ಮೆ ಪ್ರಶಸ್ತಿಯ ಹೊಸ್ತಿಲಿಗೆ ಬಂದು ಎಡವಿತು. ಇನ್ನು ಕಳೆದೊಂದು ದಶಕದಿಂದ ಐಸಿಸಿ ಟ್ರೋಫಿ ಬರ ಎದುರಿಸಿದ್ದ ಭಾರತ ತಂಡಕ್ಕೆ ರೋಹಿತ್ ಶರ್ಮಾ ನಾಯಕತ್ವದಲ್ಲಿ ಐಸಿಸಿ ಟ್ರೋಫಿ ಒಲಿದಿದೆ. ಮಹೇಂದ್ರ ಸಿಂಗ್ ಧೋನಿ ಬಳಿಕ ಐಸಿಸಿ ಟ್ರೋಫಿ ಗೆದ್ದ ಮೊದಲ ನಾಯಕ ಎನ್ನುವ ಹಿರಿಮೆಗೆ ಕೊಹ್ಲಿ ಪಾತ್ರರಾಗಿದ್ದಾರೆ.
ವೆಸ್ಟ್ ಇಂಡೀಸ್ ನ ಬಾರ್ಬಡೊಸ್ ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ಬಲಿಷ್ಟ ದಕ್ಷಿಣ ಆಫ್ರಿಕಾ ಕೈಯಿಂದ ಗೆಲುವನ್ನು ಕಿತ್ತುಕೊಂಡು ದಾಖಲೆ ನಿರ್ಮಿಸಿದೆ. ಅತ್ಯಂತ ರೋಚಕ ಘಟ್ಟದಲ್ಲಿ ಬಹುತೇಕ ಸೋತ ಪಂದ್ಯವನ್ನು ಮತ್ತೆ ಭಾರತದತ್ತ ತಿರುಗಿಸಿ ಗೆಲುವಿನ ದಡ ಸೇರಿಸಿದ ಕೀರ್ತಿ ವೇಗಿ ಜಸ್ಪಿçತ್ ಬುಮ್ರಾ ಅವರಿಗೆ ಸಲ್ಲಲೇಬೇಕು.
ಗೆಲ್ಲಲು 177 ರನ್ ಸವಾಲಿನ ಗುರಿ ಪಡೆದ ದಕ್ಷಿಣ ಆಫ್ರಿಕಾ ತಂಡವು ಉತ್ತಮ ಆರಂಭ ಪಡೆಯಲು ವಿಫಲವಾಯಿತು. ರೀಜಾ ಹೆಂಡ್ರಿಕ್ಸ್ 4 ರನ್ ಗಳಿಸಿ ಜಸ್ಪ್ರೀತ್ ಬುಮ್ರಾ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಇನ್ನು ಇದರ ಬೆನ್ನಲ್ಲೇ ನಾಯಕ ಏಯ್ಡನ್ ಮಾರ್ಕ್ರಮ್ ಕೇವಲ 4 ರನ್‌ಗಳಿಸಿ ಆರ್ಶದೀಪ್ ಸಿಂಗ್ ಬೌಲಿಂಗ್‌ನಲ್ಲಿ ವಿಕೆಟ್ ಕೀಪರ್ ರಿಷಭ್ ಪಂತ್‌ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಸ್ಟಬ್ಸ್-ಡಿ ಕಾಕ್ ಆಸರೆ: ಕೇವಲ 12 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ಮೂರನೇ ವಿಕೆಟ್‌ಗೆ ಕ್ವಿಂಟನ್ ಡಿ ಕಾಕ್ ಹಾಗೂ ಟ್ರಿಸ್ಟಿನ್ ಸ್ಟಬ್ಸ್ ಕೇವಲ 38 ಎಸೆತಗಳಲ್ಲಿ 58 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಸ್ಟಬ್ಸ್ 21 ಎಸೆತಗಳನ್ನು ಎದುರಿಸಿ 31 ರನ್ ಸಿಡಿಸಿ ಅಕ್ಷರ್ ಪಟೇಲ್ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಇನ್ನು ಮತ್ತೊಂದು ತುದಿಯಲ್ಲಿ ಜವಾಬ್ದಾರಿಯುತ ಆಟವಾಡಿದ ಕ್ವಿಂಟನ್ ಡಿ ಕಾಕ್ 31 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 39 ರನ್ ಬಾರಿಸಿ ಆರ್ಶದೀಪ್‌ಗೆ ಎರಡನೇ ಬಲಿಯಾದರು.
ಗುಡುಗಿದ ಕ್ಲಾಸೇನ್: ಸ್ಟಬ್ಸ್ ವಿಕೆಟ್ ಪತನದ ಬಳಿಕ ಕ್ರೀಸ್‌ಗಿಳಿದ ಹೆನ್ರಿಚ್ ಕ್ಲಾಸೇನ್ ಪಂದ್ಯದ ದಿಕ್ಕನ್ನೇ ಬದಲಿಸಿದರು. ಆರಂಭದಿAದಲೇ ಕುಲ್ದೀಪ್ ಯಾದವ್ ಹಾಗೂ ಅಕ್ಷರ್ ಪಟೇಲ್ ಮೇಲೆ ಕ್ಲಾಸೇನ್ ಸವಾರಿ ಮಾಡಿದರು. ಅದರಲ್ಲೂ 15ನೇ ಓವರ್ ಎಸೆತದ ಅಕ್ಷರ್ ಪಟೇಲ್ ಒಂದೇ ಓವರ್‌ನಲ್ಲಿ ಕ್ಲಾಸೇನ್ ತಲಾ 2 ಸಿಕ್ಸರ್ ಹಾಗೂ ಬೌಂಡರಿ ಸಹಿತ 24 ರನ್ ಬಾರಿಸಿ ಪಂದ್ಯ ದಕ್ಷಿಣ ಆಫ್ರಿಕಾ ಪರ ವಾಲುವಂತೆ ಮಾಡಿದರು. ಕ್ಲಾಸೇನ್ ಕೇವಲ 23 ಎಸೆತಗಳನ್ನು ಎದುರಿಸಿ ಆಕರ್ಷಕ ಅರ್ಧಶತಕ ಪೂರೈಸಿದರು. ಅಂತಿಮವಾಗಿ ಕ್ಲಾಸೇನ್ 27 ಎಸೆತಗಳನ್ನು 2 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 52 ರನ್ ಬಾರಿಸಿ ಹಾರ್ದಿಕ್ ಪಾಂಡ್ಯಗೆ ವಿಕೆಟ್ ಒಪ್ಪಿಸಿದರು.

ಕೊನೆಯ ಓವರ್‌ನಲ್ಲಿ ದಕ್ಷಿಣ ಆಫ್ರಿಕಾ ಗೆಲ್ಲಲು 16 ರನ್ ಬೇಕಿತ್ತು. 20ನೇ ಓವರ್ ದಾಳಿಗಿಳಿದ ಹಾರ್ದಿಕ್ ಪಾಂಡ್ಯ, ಡೇಂಜರ್ಸ್ ಡೇವಿಡ್ ಮಿಲ್ಲರ್(21) ಅವರನ್ನು ಬಲಿ ಪಡೆದರು. ಸೂರ್ಯಕುಮಾರ್ ಯಾದವ್ ಅವರು ಹಿಡಿದ ಅತ್ಯದ್ಭುತ ಕ್ಯಾಚ್‌ಗೆ ಮಿಲ್ಲರ್ ಔಟಾಗುತ್ತಿದ್ದಂತೆಯೇ ಭಾರತದ ಗೆಲುವಿನ ಹಾದಿ ಸುಗಮವಾಯಿತು.ಇದಾದ ಬಳಿಕ ರಬಾಡ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿದರಾದರೂ ಆ ಬಳಿಕ ಹಾರ್ದಿಕ್ ಪಾಂಡ್ಯ, ಹರಿಣಗಳನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ಭಾರತ 9 ರನ್ ಗಳಿಂದ ಪಂದ್ಯ ಗೆದ್ದು ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿತು.

 

 

 

                        

                          

 

 

 

 

 

                        

                          

 

 

 

 

 

Leave a Reply

Your email address will not be published. Required fields are marked *