ಉಡುಪಿ: ಗಣೇಶ ಚತುರ್ಥಿ ಮತ್ತು ಈದ್ ಮಿಲಾದ್ ಹಬ್ಬಗಳ ಹಿನ್ನೆಲೆಯಲ್ಲಿ ವ್ಯಾಪಕ ಬಂದೋಬಸ್ತ್ ಮಾಡಲಾಗಿದ್ದು, ಎಲ್ಲ ಠಾಣೆ ವ್ಯಾಪ್ತಿಗಳಲ್ಲಿ ಶಾಂತಿ ಸಭೆಗಳನ್ನು ಆಯೋಜನೆ ಮಾಡಿದ್ದೇವೆ ಎಂದು ಉಡುಪಿ ಎಸ್ಪಿ ಡಾ.ಅರುಣ್ ಕುಮಾರ್ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೂರ್ತಿ ಪ್ರತಿಷ್ಠಾಪನೆಗೂ ಮುನ್ನ ಇಲಾಖೆಯಿಂದ ಅನುಮತಿ ಪಡೆಯುವುದು ಕಡ್ಡಾಯ. ರಾತ್ರಿ 10 ಗಂಟೆಯ ಒಳಗೆ ಡಿಜೆಗೆ ಅವಕಾಶ ಇದ್ದು, ಹತ್ತರ ನಂತರ ಡಿಜೆ ಸೌಂಡ್ ಕಡಿಮೆ ಮಾಡುವಂತೆ ಸೂಚನೆ ನೀಡಿದ್ದೇವೆ. ಹಬ್ಬಕ್ಕೆ ಸಂಬಂಧಪಟ್ಟಂತೆ ಬಂಟಿಂಗ್ ಮತ್ತು ಬ್ಯಾನರ್ ಗಳಿಗೆ ಪೂರ್ವಾನುಮತಿ ಕಡ್ಡಾಯವಾಗಿದೆ ಎಂದು ಹೇಳಿದ್ದಾರೆ.
ನಿಯಮ ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ 472 ಕಡೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. 62 ಸ್ಥಳಗಳನ್ನು ಈದ್ ಮಿಲಾದ್ ಹಬ್ಬಕ್ಕೆ ಗುರುತಿಸಲಾಗಿದೆ. ಬಂದೋಬಸ್ತ್ ಗಾಗಿ ಕೆ ಎಸ್ ಆರ್ ಪಿ ಮತ್ತು ಡಿಆರ್ ಪೊಲೀಸ್ ಸೇರಿದಂತೆ ಭದ್ರತೆಗಾಗಿ 200 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.