ಕಾರ್ಕಳ: ಶೃಂಗೇರಿ ಕಡೆಯಿಂದ ಕಾರ್ಕಳ ಕಡೆಗೆ ಬರುತ್ತಿದ್ದ ಟಿಪ್ಪರ್ ಲಾರಿ ಹಾಗೂ ಬಜಗೋಳಿ ಕಡೆಯಿಂದ ಶೃಂಗೇರಿ ಕಡೆಗೆ ಹೋಗುತ್ತಿದ್ದ ಮಿನಿ ಬಸ್ ನಡುವೆ ಮಾಳ ಘಾಟಿಯಲ್ಲಿ ಅಪಘಾತ ಸಂಭವಿಸಿದ್ದು, ಈ ಘಟನೆಗೆ ಟಿಪ್ಪರ್ ಬಾಲಕನ ಅಜಾಗರೂಕತೆ ಕಾರಣವೆಂದು ಆರೋಪಿಸಿ ಮಿನಿ ಬಸ್ಸಿನಲ್ಲಿದ್ದ ಪ್ರಯಾಣಿಕರ ತಂಡ ಟಿಪ್ಪರ್ ಚಾಲಕನಿಗೆ ಅವಾಚ್ಯವಾಗಿ ನಿಂದಿಸಿ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದಾರೆ.
ಸೋಮವಾರ ಸಂಜೆ ಈ ಅಪಘಾತ ಸಂಭವಿಸಿದ್ದು, ಟಿಪ್ಪರ್ ಚಾಲಕ ಮೂಡಿಗೆರೆಯ ಶಿವು ಜಿ.ಎಸ್ ಹಲ್ಲೆಗೊಳಗಾದ ವ್ಯಕ್ತಿ. ಈ ಕುರಿತು ಮಿನಿ ಬಸ್ಸಿನಲ್ಲಿದ್ದ 8 ಪ್ರಯಾಣಿಕರ ವಿರುದ್ಧ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಳ ಘಾಟಿಯ ಕಡಿದಾದ ತಿರುವುಗಳಿಂದ ಕೂಡಿದ ರಸ್ತೆಯಲ್ಲಿ ಪದೇಪದೇ ಅಪಘಾತ ಸಂಭವಿಸುತ್ತಿದ್ದು, ಬಹುತೇಕ ಅಪಘಾತಗಳು ಚಾಲಕರ ವೇಗ ಹಾಗೂ ಅಜಾಗರೂಕತೆಯಿಂದ ಸಂಭವಿಸುತ್ತವೆ. ಎಚ್ಚರಿಕೆಯಿಂದ ವಾಹನ ಚಲಾಯಿಸಿದರೆ ಇಂತಹ ಅಪಘಾತಗಳಿಗೆ ಕಡಿವಾಣ ಹಾಕಬಹುದು.