

ಕರಾವಳಿ ನ್ಯೂಸ್ ಡೆಸ್ಕ್:
ಇಂದು ಗುರು ಪೂರ್ಣಿಮೆ ಹಬ್ಬ. ಹಿಂದೂ ಪಂಚಾಂಗದ ಪ್ರಕಾರ ಆಷಾಢ ಮಾಸದ ಹುಣ್ಣಿಮೆಯನ್ನು ಹಿಂದೂಗಳು ಸಾಂಪ್ರದಾಯಿಕವಾಗಿ ಗುರು ಪೂರ್ಣಿಮೆ ಎಂದು ಆಚರಿಸುತ್ತಾರೆ. ಈ ದಿನದಂದು, ಹಿಂದೂಗಳು ಮತ್ತು ಬೌದ್ಧರು ಸಹ ತಮ್ಮ ಗುರುವಿಗೆ ಪೂಜೆ ಸಲ್ಲಿಸುತ್ತಾರೆ.
ಗುರುಪೂರ್ಣಿಮೆಯ ದಿನ ಗುರು ಸೂತ್ರದ ಪ್ರಭಾವ ಇತರ ದಿನಗಳಿಗಿಂತ ಹೆಚ್ಚು ಪ್ರಭಾವಶಾಲಿಯಾಗಿರುತ್ತದೆ ಎನ್ನುವ ನಂಬಿಕೆ ಇದೆ. ಗುರು ಅನ್ನುವ ಶಬ್ದ ‘ಗು’ ಮತ್ತು ‘ರು’ ಅನ್ನುವ ಮೂಲ ಪದಗಳನ್ನು ಹೊಂದಿದೆ. ಸಂಸ್ಕೃತ ಭಾಷೆಯಲ್ಲಿ ‘ಗು’ ಅಂದರೆ ಅಂಧಕಾರ ಅಥವಾ ಅಜ್ಞಾನ. ‘ರು’ ಅಂದರೆ ದೂರ ಮಾಡುವ ಎಂದರ್ಥ. ಅದಕ್ಕೆ ಗುರು ಅಂದರೆ ಅಂಧಕಾರ ಅಥವಾ ಅಜ್ಞಾನವನ್ನು ದೂರ ಮಾಡುವವರು ಎಂದರ್ಥ.ಗುರುಪೂರ್ಣಿಮೆಯಂದು ಗುರುಗಳನ್ನು ಸ್ಮರಿಸುವುದು, ಅವರ ಆಶೀರ್ವಾದ ಪಡೆಯುವುದು, ಪಾದಪೂಜೆ ಮಾಡುವುದು, ಗುರು ದಕ್ಷಿಣೆ ನೀಡುವುದು ಮುಂತಾದ ಕ್ರಿಯೆಗಳನ್ನು ಮಾಡಲಾಗುತ್ತದೆ. ಇದರ ಜೊತೆಗೆ, ದಾನ ಧರ್ಮಗಳನ್ನು ಮಾಡುವುದರಿಂದ ಆತ್ಮ ಸಂತೋಷ ಹೆಚ್ಚುತ್ತದೆ ಎಂದು ನಂಬಲಾಗಿದೆ.
ಹಾಲು, ಮೊಸರು, ತುಪ್ಪ, ಅನ್ನ ಮುಂತಾದ ವಸ್ತುಗಳನ್ನು ದಾನ ಮಾಡುವುದು ಸಾಂಪ್ರದಾಯಿಕವಾಗಿದೆ.ಗುರುಪೂರ್ಣಿಮೆಯ ಆಚರಣೆಯಿಂದ ಗ್ರಹ ಕಾಟಗಳು ಕಡಿಮೆಯಾಗುವುದು, ಆರೋಗ್ಯ, ಮಾನಸಿಕ ಸ್ಥೈರ್ಯ, ಮತ್ತು ಆತ್ಮವಿಶ್ವಾಸ ಹೆಚ್ಚುವುದು ಎಂದು ಹೇಳಲಾಗುತ್ತದೆ. ಈ ದಿನ ಒಳ್ಳೆಯ ಕಾರ್ಯಗಳನ್ನು ಮಾಡುವುದು, ಗುರುಗಳನ್ನು ಸ್ಮರಿಸುವುದು ಮತ್ತು ಅವರ ಆಶೀರ್ವಾದವನ್ನು ಪಡೆಯುವುದು ಮುಖ್ಯವಾಗಿದೆ. ಗುರುಗಳೇ ಬ್ರಹ್ಮ, ವಿಷ್ಣು, ಮಹೇಶ್ವರ ಎಂದು ಹೇಳಲಾಗುತ್ತದೆ. ಅವರ ಆಶೀರ್ವಾದದಿಂದ ಜೀವನದಲ್ಲಿ ಯಶಸ್ಸು ಮತ್ತು ಸಮೃದ್ಧಿ ದೊರೆಯುತ್ತದೆ.



