ಬೆಂಗಳೂರು, ಆ 22: ಬಂಟ್ವಾಳ ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ SDPI ಜತೆ ಅಧಿಕಾರ ಹಂಚಿಕೊಂಡು, SDPI ಜತೆ ನಮಗೆ ಯಾವುದೇ ಸಂಬಂಧ ಇಲ್ಲ ಎನ್ನುತ್ತಿದ್ದ ಕಾಂಗ್ರೆಸ್ ನ ನಿಜ ಬಣ್ಣ ಬಯಲಾಗಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಸಚಿವ ಸುನಿಲ್ ಕುಮಾರ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
SDPI ವಿಚಾರದಲ್ಲಿ ಕಾಂಗ್ರೆಸ್ ಸದಾ ದ್ವಂದ್ವ ನಿಲುವು ಹೊಂದಿದೆ. ತನ್ನ ಅನುಕೂಲತೆಗೆ ತಕ್ಕಂತೆ ಈ ಸಂಬಂಧವನ್ನು ನೈತಿಕ ಹಾಗೂ ಅನೈತಿಕವಾಗಿಟ್ಟುಕೊಳ್ಳುವುದು ಕಾಂಗ್ರೆಸ್ ಗೆ ಛಾಳಿಯಾಗಿದೆ. ಈ ಹೊಂದಾಣಿಕೆಯಿಂದ SDPI ಕಾಂಗ್ರೆಸ್ ಪಕ್ಷದ ಬಿ ಟೀಂ ಎನ್ನುವುದು ಸಾಬೀತಾಗಿದೆ.
ರಾಜ್ಯಪಾಲರ ನಿವಾಸಕ್ಕೆ ಬಾಂಗ್ಲಾ ಮಾದರಿಯಲ್ಲಿ ನುಗ್ಗುತ್ತೇವೆ ಎಂದ ಕಾಂಗ್ರೆಸ್ MLC ಐವಾನ್ ಡಿಸೋಜಾ ಅವರ ಹೇಳಿಕೆ SDPI ಜತೆ ಕಾಂಗ್ರೆಸ್ ಪುನರ್ವಿವಾಹದ ಸೂಚನೆ ಎನ್ನಬಹುದಾಗಿದೆ.
ಈ ಹೊಂದಾಣಿಕೆ ದಕ್ಷಿಣ ಕನ್ನಡ ಹಾಗೂ ಬೇರೆ ಜಿಲ್ಲೆಗಳಿಗೆ ಅಪಾಯದ ಮುನ್ಸೂಚನೆಯಾಗಿದೆ. ಕಾಂಗ್ರೆಸ್ ಹಾಗೂ SDPI ಪಕ್ಷಗಳಿಗೆ ನಿಷೇಧಿತ PFI ಸಂಘಟನೆ ಜತೆಗೆ ನಿಕಟ ಸಂಬಂಧ ಇತ್ತೆನ್ನುವುದು ಸಾಬೀತಾಗಿದೆ. ಮುಂಬರುವ ದಿನಗಳಲ್ಲಿ ಈ ಅಪಾಯಕಾರಿ ಕೂಟ ಹಿಂದೂ ಕಾರ್ಯಕರ್ತರು ಹಾಗೂ ಸಂಘಟನೆಗಳಿಗೆ ತೊಂದರೆ ನೀಡುವುದು ನಿಶ್ಚಿತವಾಗಿದ್ದು ಸಮಾಜದ ಶಾಂತಿ,ನೆಮ್ಮದಿಗೆ ಭಂಗವಾಗುವ ಸಾಧ್ಯತೆಗಳಿವೆ.ಆದ್ದರಿಂದ ಈ ಪಕ್ಷಗಳ ಹಿಡನ್ ಅಜೆಂಡಾ ಬಯಲುಗೊಳಿಸಬೇಕಿದೆ ಎಂದು ಸುನಿಲ್ ಕುಮಾರ್ ಒತ್ತಾಯಿಸಿದ್ದಾರೆ.
`