ಉಡುಪಿ/ಚಿಕ್ಕಮಗಳೂರು: ಈ ಬಾರಿ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರವು ಬಿಜೆಪಿ ಪಾಲಿಗೆ ಅತ್ಯಂತ ಸವಾಲಿನ ಕ್ಷೇತ್ರವಾಗಿ ಪರಿಣಮಿಸುವ ಎಲ್ಲಾ ಸಾಧ್ಯತೆಗಳು ನಿಚ್ಚಳವಾಗಿವೆ.ಇದೇ ಕ್ಷೇತ್ರದಿಂದ ಕಳೆದ ಬಾರಿ ಗೆದ್ದು ಬೀಗಿದ್ದ ಹಾಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತೊಮ್ಮೆ ಇದೇ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸುತ್ತಿದ್ದಾಲೇ ಅವರ ವಿರುದ್ಧ ಪಕ್ಷದ ವಿರೋಧಿಗಳೇ ಗೋ ಬ್ಯಾಕ್ ಶೋಭಾ ಎನ್ನುವ ಸ್ಲೋಗನ್ ಕೂಗಿದ್ದಾರೆ. ಆದರೆ ಇದಕ್ಕೆ ಸೊಪ್ಪು ಹಾಕದ ಶೋಭಾ ಕರಂದ್ಲಾಜೆ ತನ್ನ ವಿರುದ್ಧ ಸಮರ ಸಾರಿದ ವಿರೋಧಿಗಳಿಗೆ ಬಹಿರಂಗವಾಗಿಯೇ ಟಕ್ಕರ್ ನೀಡಿದ್ದಾರೆ. ಶೋಭಾ ಸ್ಪರ್ಧೆಗೆ ಮಾಜಿ ಸಚಿವ ಸಿ.ಟಿ ರವಿ ಬಹಿರಂಗವಾಗಿಯೇ ಟೀಕಿಸಿದ್ದು ಬಿಜೆಪಿ ಪಾಲಿಗೆ ಈ ಕ್ಷೇತ್ರ ಅತ್ಯಂತ ಕಠಿಣವಾಗಲಿದೆಯೇ ಎನ್ನುವ ಪ್ರಶ್ನೆ ಮೂಡಿದೆ. ಶೋಭಾ ಸ್ಪರ್ಧೆ ವಿರೋಧಿಸಿ ಉಡುಪಿಯಲ್ಲೂ ಪಕ್ಷದ ಕಾರ್ಯಕರ್ತರಿಂದ ವಿರೋಧ ವ್ಯಕ್ತವಾಗಿದ್ದು,ರಾಜ್ಯ ಬಿಜೆಪಿ ನಾಯಕರಿಗೆ ಹಾಗೂ ಹೈಕಮಾಂಡ್ ನಾಯಕರಿಗೆ ಉಡುಪಿ ಚಿಕ್ಕಮಗಳೂರು ಕ್ಷೇತ್ರ ಕಗ್ಗಂಟಾಗಿ ಪರಿಣಮಿಸಿದೆ.
ಈ ಎಲ್ಲಾ ಗೊಂದಲದ ನಡುವೆ ಬಿಜೆಪಿಯಿಂದ ಶೋಭಾ ಕರಂದ್ಲಾಜೆ ಮಾತ್ರವಲ್ಲದೇ ಸಿ.ಟಿ ರವಿ ಹಾಗೂ ಪ್ರಮೋದ್ ಮಧ್ವರಾಜ್ ಅವರ ಹೆಸರುಗಳೂ ಕೇಳಿಬರುತ್ತಿದ್ದು ಅಂತಿಮವಾಗಿ ಹೈಕಮಂಡ್ ಯಾರನ್ನು ಕಣಕ್ಕಿಳಿಸಲಿದೆ ಎನ್ನುವುದೇ ಯಕ್ಷಪ್ರಶ್ನೆಯಾಗಿದೆ.
ಶೋಭಾ ಕರಂದ್ಲಾಜೆ ವಿರುದ್ಧ ಈ ಹಿಂದೆಯೂ ಗೋ ಬ್ಯಾಕ್ ಶೋಭಾ ಘೋಷಣೆ ಮೊಳಗಿದ್ದು ಈ ಬಾರಿ ಶೋಭಾ ಕರಂದ್ಲಾಜೆಗೆ ಟಿಕೆಟ್ ಒಲಿಯುವ ಬಗ್ಗೆ ಸಾಕಷ್ಟು ಅನುಮಾನ ಮೂಡಿದೆ. ಆದರೆ ಶೋಭಾ ಕರಂದ್ಲಾಜೆ ಪರವಾಗಿ ಮಾತನಾಡಿರುವ ಬಿಎಸ್‌ವೈ, ಇದು ವಿರೋಧಿಗಳ ಷಡ್ಯಂತ್ರವಾಗಿದೆ, ಯಾರಿಗೆ ಟಿಕೆಟ್ ಕೊಡಬೇಕೆನ್ನುವುದು ಹೈಕಮಾಂಡ್ ನಿರ್ಧರಿಸಲಿದೆ ಎಂದು ಬ್ಯಾಟ್ ಬೀಸಿದ್ದಾರೆ. ಇದಲ್ಲದೇ ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಇರುವ ಹಿನ್ನಲೆಯಲ್ಲಿ ಶೋಭಾ ಕರಂದ್ಲಾಜೆಯವರ ಹೆಸರು ಪಟ್ಟಿಯಲ್ಲಿ ಸೇರ್ಪಡೆಯಾಗಲಿದೆ ಎನ್ನುವ ಲೆಕ್ಕಾಚಾರ ಪಕ್ಷದ ವಲಯದಲ್ಲಿದೆ.
ಬಿಜೆಪಿಯ ಬಣಜಗಳ ಹಾಗೂ ಬೇಗುದಿಯ ಲಾಭ ಪಡೆಯಲು ಕೈ ಪಡೆ ಅತ್ಯಂತ ಸಮರ್ಥ ಹಾಗೂ ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕಿಳಿಸುವ ಸಾಧ್ಯತೆ ದಟ್ಟವಾಗಿದೆ. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್ ಹೆಗ್ಡೆಯವರು ಕಾಂಗ್ರೆಸ್ ಸೇರ್ಪಡೆಯ ವಿಚಾರ ಬಹುತೇಕ ಫೈನಲ್ ಆಗಿದೆ ಎನ್ನಲಾಗಿದ್ದು, ಇದಕ್ಕೆ ಪೂರಕವಾಗಿ ಜಯಪ್ರಕಾಶ್ ಹೆಗ್ಡೆಯವರು ಪರೋಕ್ಷವಾಗಿ ಉಡುಪಿಯ ಮಾಧ್ಯಮ ಸಂವಾದದಲ್ಲಿ ಹೇಳಿರುವುದು ಇದಕ್ಕೆ ಪುಷ್ಠಿ ನೀಡುವಂತಿದೆ. ಜಯಪ್ರಕಾಶ್ ಹೆಗ್ಡೆ ಕಾಂಗ್ರೆಸ್ ಮರುಸೇರ್ಪಡೆಯಾದಲ್ಲಿ ಅವರನ್ನೇ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಕಾಂಗ್ರೆಸ್ ಸಿದ್ದತೆ ನಡೆಸಿದೆ, ಆದರೆ ಅವರು ಬಿಜೆಪಿಯಿಂದ ಕಾಂಗ್ರೆಸ್ ಮರುಸೇರ್ಪಡೆಗೆ ಪಕ್ಷದಲ್ಲೇ ಹಲವರು ಅಪಸ್ವರ ಎತ್ತಿರುವ ವಿಚಾರವೂ ಗುಟ್ಟಾಗಿ ಉಳಿದಿಲ್ಲ. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಜಯಪ್ರಕಾಶ್ ಹೆಗ್ಡೆ ಹೊರತುಪಡಿಸಿ ಸಮರ್ಥ ಪರ್ಯಾಯ ಅಭ್ಯರ್ಥಿ ಆಯ್ಕೆ ಕಷ್ಟಸಾಧ್ಯ ಎನ್ನುವ ವಿಚಾರ ಕೈ ನಾಯಕರಿಗೂ ಮನದಟ್ಟಾಗಿದ್ದು, ಜಯಪ್ರಕಾಶ್ ಹೆಗ್ಡೆ ಸ್ಪರ್ಧಿಸಿದ್ದಲ್ಲಿ ಈ ಕ್ಷೇತ್ರ ಜಿದ್ದಾಜಿದ್ದಿನ ಕಣವಾಗುವುದು ಮಾತ್ರವಲ್ಲದೇ ಬಿಜೆಪಿ ಬಣಜಗಳದಿಂದ ಕಾಂಗ್ರೆಸ್ ಪಕ್ಷಕ್ಕೆ ವರದಾನವಾಗಲಿದೆ ಎನ್ನುವ ವಿಶ್ಲೇಷಣೆಯೂ ನಡೆದಿದೆ.
ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳು ನರೇಂದ್ರ ಮೋದಿಯವರ ವರ್ಚಸ್ಸು ಹಾಗೂ ಸಾಧನೆಗಳನ್ನೇ ನಂಬಿ ತಮ್ಮ ಗೆಲುವಿನ ಮಾನದಂಡವಾಗಿ ನಾ ಮುಂದು ತಾ ಮುಂದು ಎಂಬAತೆ ಜಿದ್ದಿಗೆ ಬಿದ್ದು ಟಿಕೆಟಿಗಾಗಿ ಪೈಪೋಟಿ ನಡೆಸುತ್ತಿದ್ದು, ಅಂತಿಮವಾಗಿ ಟಿಕೆಟ್ ಯಾರಿಗೆ ಒಲಿಯಲಿದೆ ಎನ್ನುವುದು ಕಾದುನೋಡಬೇಕಿದೆ.