ಬೆಂಗಳೂರು: ವಕ್ಫ್ ಆಸ್ತಿ ಎಂದು ಪಹಣಿಯಲ್ಲಿ ನಮೂದಾದ ಹಿನ್ನಲೆ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಸುಳ್ಳು ಸುದ್ದಿ ಪೋಸ್ಟ್ ಮಾಡಿದ್ದಾರೆಂಬ ಆರೋಪದಲ್ಲಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಹಾವೇರಿಯ ಸಿಇಎನ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು. ಇದೀಗ ಈ ಪ್ರಕರಣಕ್ಕೆ ಹೈಕೋರ್ಟ್ ತಡೆ ನೀಡಿದೆ.
ಪ್ರಕರಣಕ್ಕೆ ತಡೆಕೋರಿ ತೇಜಸ್ವಿ ಸೂರ್ಯ ಅವರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಮೃತ ರೈತನ ತಂದೆಯ ಹೇಳಿಕೆ ಆಧರಿಸಿ ಟ್ವೀಟ್ ಮಾಡಲಾಗಿದ್ದು, ಬಳಿಕ ಪೊಲೀಸರ ಸ್ಪಷ್ಟನೆ ನಂತರ ಟ್ವೀಟ್ ಡಿಲೀಟ್ ಮಾಡಲಾಗಿದೆ. ಹೀಗಾಗಿ ಪ್ರಕರಣಕ್ಕೆ ತಡೆ ನೀಡುವಂತೆ ತೇಜಸ್ವಿ ಸೂರ್ಯ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿದ್ದರು. ಇದನ್ನು ಪುರಸ್ಕರಿಸಿದ ಕೋರ್ಟ್, ತೇಜಸ್ವಿ ಸೂರ್ಯ ವಿರುದ್ಧದ ಪ್ರಕರಣಕ್ಕೆ ತಡೆಯಾಜ್ಞೆ ನೀಡಿದೆ.
ಹರನಗೇರಿ ರೈತ ರುದ್ರಪ್ಪ ಆತ್ಮಹತ್ಯೆ ಬಗ್ಗೆ ಟ್ವೀಟ್ ಮಾಡಿದ್ದ ತೇಜಸ್ವಿ ಸೂರ್ಯ, ವಕ್ಫ್ ನೋಟಿಸ್ ಗೆ ಹೆದರಿ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದಿದ್ದರು. ಇನ್ನು ಹಾನಗಲ್ ತಾಲೂಕು ಹರನಗೇರಿ ಗ್ರಾಮದ ರುದ್ರಪ್ಪ ಎಂಬ ರೈತ ಆತ್ಮಹತ್ಯೆಗೆ ಶರಣಾಗಿದ್ದ. 2022ರಲ್ಲಿ ಸಾಲ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿರೋದಾಗಿ ಪ್ರಕರಣ ದಾಖಲಾಗಿತ್ತು. ಆದರೆ ವಕ್ಪ್ ಅಂತ ಪಹಣಿಯಲ್ಲಿ ನಮೂದಾಗಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದ. ವಕ್ಪ್ ಬೋರ್ಡ್ ನಿಂದ ಅನ್ಯಾಯ ಆಗಿದೆ ಎಂದು ಕುಟುಂಬಸ್ಥರು ದೂರಿದ್ದರು.
































































































