ಹೆಬ್ರಿ: ಹೆಬ್ರಿ ತಾಲೂಕಿನ ಸೀತಾನದಿ ಎಂಬಲ್ಲಿನ ನೆಲ್ಲಿಕಟ್ಟೆ ಕ್ರಾಸ್ ಬಳಿಯ ಸೀತಾನದಿ ಹೊಳೆಯಲ್ಲಿ ಸ್ನಾನಕ್ಕೆಂದು ಬಂದಿದ್ದ ಇಬ್ಬರು ಪ್ರವಾಸಿಗರು ಮುಳುಗಿ ಮೃತಪಟ್ಟಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಡಾ. ದೀಪಕ್(34) ಹಾಗೂ ಉದ್ಯಮಿ ಡೇನಿಯಲ್ ಸೀನು(40) ಎಂಬವರು ಮೃತಪಟ್ಟ ದುರ್ದೈವಿಗಳು. ಭಾನುವಾರ ಸಂಜೆ ಈ ದುರ್ಘಟನೆ ನಡೆದಿದ್ದು, ಶೃಂಗೇರಿಯಲ್ಲಿ ವೈದ್ಯರಾಗಿದ್ದ ಡಾ.ದೀಪಕ್ ತನ್ನ ಸ್ನೇಹಿತರಾದ ಡಾ.ವಿನ್ಸೆಂಟ್ ಮೋಹನ್, ಹಾಗೂ ಸೀನು ಡೇನಿಯಲ್ ಜತೆ ಭಾನುವಾರ ಬೆಳಗ್ಗೆ ಉಡುಪಿಗೆ ಬಂದಿದ್ದರು.ಬಳಿಕ ಮಧ್ಯಾಹ್ನ ಹೆಬ್ರಿಯಲ್ಲಿ ಊಟ ಮುಗಿಸಿ ಮರಳಿ ಶಿವಮೊಗ್ಗ ಕಡೆಗೆ ಹೋಗುವ ದಾರಿಯಲ್ಲಿ ಸೀತಾನದಿ ಹೊಳೆಯ ಬಳಿ ಕಾರು ನಿಲ್ಲಿಸಿ ಮೂವರು ಕೂಡ ಸ್ನಾನಕ್ಕೆಂದು ಹೊಳೆಗೆ ಇಳಿದಿದ್ದರು. ಮೂವರ ಪೈಕಿ ಸೀನು ಡೇನಿಯಲ್ ಸ್ನಾನ ಮಾಡುತ್ತಾ ಆಳವಾದ ನೀರಿಗೆ ಹೋದಾಗ ಈಜು ಬಾರದೇ ನೀರಿನಲ್ಲಿ ಮುಳುಗುತ್ತಿರುವಾಗ ಸ್ನೇಹಿತ ಡಾ.ದೀಪಕ್ ಅವರು ರಕ್ಷಿಸಲು ಹೋದಾಗ ಇಬ್ಬರೂ ನೀರಿನಲ್ಲಿ ಮುಳುಗಿ ಒದ್ದಾಡುತ್ತಿದ್ದಾಗ ಡಾ.ವಿನ್ಸೆಂಟ್ ನೀರಿಗೆ ಹಾರಿ ಒಬ್ಬರನ್ನು ರಕ್ಷಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ.
ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಒಟ್ಟಿನಲ್ಲಿ ಭಾನುವಾರ ರಜಾದಿನವಾಗಿದ್ದ ಹಿನ್ನೆಲೆಯಲ್ಲಿ ಪ್ರವಾಸಕ್ಕೆಂದು ಬಂದ ಸ್ನೇಹಿತರ ಬದುಕು ದಾರುಣವಾಗಿ ಅಂತ್ಯವಾಗಿರುವುದು ನಿಜಕ್ಕೂ ವಿಪರ್ಯಾಸ.