ಕಾರ್ಕಳ: ಕಾರ್ಕಳ ಕ್ಷೇತ್ರದ ಕಾಂಗ್ರೆಸ್‌ನ ಪರಾಜಿತ ಅಭ್ಯರ್ಥಿ ಮುನಿಯಾಲು ಉದಯ್ ಕುಮಾರ್ ಶೆಟ್ಟಿಯವರು ಮೊನ್ನೆ-ಮೊನ್ನೆ ತನಕ ಪರಶುರಾಮ ಥೀಂ ಪಾರ್ಕ್ ವಿಷಯ ಹಿಡಿದು ರಾಜಕೀಯ ಮಾಡುತ್ತಿದ್ದವರು ಇನ್ನು ಇದೇ ವಿಷಯ ಹೆಚ್ಚು ಸಮಯ ಬಾಳಿಕೆ ಬರುವುದಿಲ್ಲ ಎಂದು ಮನಗಂಡು, ಇದೀಗ ಬಿಜೆಪಿಯಲ್ಲಿ ಒಡಕು ಉಂಟುಮಾಡುವ ವ್ಯರ್ಥ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಉದಯ ಕುಮಾರ್ ಶೆಟ್ಟಿಯವರೇ ನೀವೊಬ್ಬ ಪಕ್ಷದ್ರೋಹಿ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಯಾರನ್ನೋ ಮೆಚ್ಚುವುದಕ್ಕೋಸ್ಕರ ನಿಮ್ಮ ಪಕ್ಷದ ವಿರುದ್ಧವೇ ಮಾಧ್ಯಮದ ಮುಂದೆ ಹೇಳಿಕೆ ಕೊಟ್ಟವರು, ನಿಮ್ಮಂತ ಪಕ್ಷ ದ್ರೋಹಿಯ ಬಾಯಲ್ಲಿ ನಮ್ಮ ಪಕ್ಷದ ಮುಖಂಡರ ಬಗ್ಗೆ ಮಾತನಾಡುವ ನೈತಿಕತೆ ನಿಮಗಿಲ್ಲ ಎಂದು ಬಿಜೆಪಿ ಹಿರಿಯ ಮುಖಂಡ ಶಂಕರ್ ಕುಂದರ್ ಕಿಡಿಕಾರಿದ್ದಾರೆ.
ಉದಯ್ ಕುಮಾರ್ ಶೆಟ್ಟಿಯವರು ತನ್ನ ರಾಜಕೀಯ ಅಸ್ಥಿತ್ವಕ್ಕಾಗಿ ಮೊದಲಿಗೆ ಪರಶುರಾಮನನ್ನು ಹಿಡಿದುಕೊಂಡರು, ಜಾತಿ-ಜಾತಿಗಳ ಮಧ್ಯೆ ವೈಮನಸನ್ನು ಸೃಷ್ಟಿ ಮಾಡುವಂತ ಹೇಯ ಕೃತ್ಯಕ್ಕೆ ಕೈ ಹಾಕಿದರು. ಸಮಾಜವನ್ನು ಜಾತಿಗಳ ಮಧ್ಯೆ ಒಡೆಯುವ ವ್ಯಕ್ತಿತ್ವ ಅವರ ಇಡೀ ದೇಹದ ನಾಡಿ-ನಾಡಿಗಳಲ್ಲಿ ಹರಿಯುವಂತೆ ಇದೆ. ಭಾತೃತ್ವದಿಂದ ಬಾಳುತ್ತಿದ್ದ ಜನರ ಮಧ್ಯೆ ಜಾತಿಯ ವಿಷ ಬೀಜ ಬಿತ್ತಿ, ಇದೀಗ ಅದು ಸಫಲವಾಗದೇ ಇರುವುದನ್ನು ಕಂಡು ನಮ್ಮ ಪಕ್ಷದ ವಿಚಾರಕ್ಕೆ ಕೈ ಹಾಕುತ್ತಿದ್ದಾರೆ. ನೀವು ಇಂತಹ ತೆವಲು ರಾಜಕೀಯ ಬಿಟ್ಟು ಕಾರ್ಕಳದ ಒಟ್ಟು ಅಭಿವೃದ್ಧಿಪಡಿಸುವ ಬಗ್ಗೆ ಮಾತನಾಡಿದರೆ ನಿಮ್ಮ ಬಗ್ಗೆ ಜನರಿಗೆ ಸ್ವಲ್ಪವಾದರೂ ಒಳ್ಳೆಯ ಮನೋಭಾವ ಮೂಡಬಹುದು.
ಮಾನ್ಯ ಉದಯ್ ಕುಮಾರ್ ಶೆಟ್ಟಿಯವರೇ, ನೀವು ನಮ್ಮ ಪಕ್ಷದ ಮುಖಂಡರಿಗೆ ಚೇಲಾ ಎನ್ನುತ್ತೀರಿ. ಆದರೆ ತನ್ನ ಸ್ವಾರ್ಥಕ್ಕಾಗಿ-ತನ್ನ ಬೇಳೆ ಬೇಯಿಸಿಕೊಳ್ಳುವುದಕ್ಕೋಸ್ಕರ ರಾಜ್ಯದಲ್ಲಿ ಭಾರತೀಯ ಜನತಾ ಪಾರ್ಟಿ ಅಧಿಕಾರದಲ್ಲಿದ್ದ ಸಂದರ್ಭ ಹಾಗೂ ಮಾನ್ಯ ಸುನಿಲ್ ಕುಮಾರ್‌ರವರು ಸಚಿವರಾಗಿದ್ದ ಸಮಯ ನೀವು ಸುನಿಲ್ ಕುಮಾರ್ ರವರ ಮನೆ ಬೆಳ್ಳಂಬೆಳಗ್ಗೆ ಪದೇ ಪದೇ ಯಾಕೆ ಹೋಗುತ್ತಿದ್ದಿರಿ? ಸುನಿಲ್ ಕುಮಾರ್‌ರವರು ಹೋದಲ್ಲಿಬಂದಲ್ಲಿ ಅವರೊಂದಿಗೆ ಕಾಣಿಸಿಕೊಳ್ಳುತ್ತಿದ್ದ ನೀವು ಸುನಿಲ್ ಕುಮಾರ್‌ರವರ ಪ್ರಭಾವ ಬಳಸಿ ನಿಮ್ಮ ಎಷ್ಟು ಕೆಲಸಗಳನ್ನು ಮಾಡಿಸಿಕೊಂಡಿದ್ದೀರಿ? ಆದರೆ ಈಗ ಬೇರೆಯವರಿಗೆ ಚೇಲಾ ಎನ್ನುತ್ತಿದ್ದೀರಿ. ಹಾಗಾದರೆ ನಿಮ್ಮನ್ನು ನಾವು ಏನೆಂತ ಕರೆಯಬೇಕು ಎಂದು ಶಂಕರ್ ಕುಂದರ್ ಪತ್ರಿಕಾ ಹೇಳಿಕೆಯಲ್ಲಿ ಪ್ರಶ್ನಿಸಿದ್ದಾರೆ.
`