Share this news

ಉಡುಪಿ: ಉಡುಪಿಯ ವೈದ್ಯರೊಬ್ಬರಿಗೆ ಮುಂಬಯಿ ಕಸ್ಟಮ್ಸ್‌ ಅಧಿಕಾರಿಗಳ ಹೆಸರಿನಲ್ಲಿ ಆನ್‌ಲೈನ್‌ನಲ್ಲಿ ಕೋಟ್ಯಂತರ ರೂ. ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಸೆನ್‌ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಗುಜರಾತ್‌ ರಾಜ್ಯದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಗುಜರಾತ್‌ ರಾಜ್ಯದ ಸೂರತ್‌ ಸಿಟಿ ದಭೋಲಿ ರಸ್ತೆಯ ನಿವಾಸಿ ನವಾದಿಯಾ ಮುಖೇಶ್‌ ಭಾಯಿ/ಗಣೇಶ್‌ ಭಾಯಿ (44), ಗುಜರಾತ್‌ನ ರಾಜ್‌ಕೋಟ್‌ ಜಿಲ್ಲೆಯ ಆಕಾಶವಾಣಿ ಚೌಕ್‌ ಯೂನಿವರ್ಸಿಟಿ ರಸ್ತೆಯ ನಿವಾಸಿ ಧರಮ್‌ಜೀತ್‌ ಕಮಲೇಶ್‌ ಚೌಹಾನ್‌ (28) ಬಂಧಿತ ಆರೋಪಿಗಳು.ಆರೋಪಿಗಳಿಂದ 5 ಮೊಬೈಲ್‌ ಫೋನ್‌ಗಳನ್ನು ಹಾಗೂ 13.95 ಲಕ್ಷ ರೂ. ನಗದನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ವೈದ್ಯ ಡಾ. ಅರುಣ್‌ ಕುಮಾರ್‌ (53) ಅವರಿಗೆ ಜು. 29ರಂದು ಅಪರಿಚಿತ ವ್ಯಕ್ತಿಗಳು ಫೋನ್‌ ಕರೆ ಮಾಡಿ ಕಸ್ಟಮ್ಸ್‌ನಿಂದ ಕರೆ ಮಾಡುವುದಾಗಿ ತಿಳಿಸಿ, ನಿಮ್ಮ ಆಧಾರ್‌ ನಂಬರ್‌ ಬಳಸಿ ಬುಕ್‌ ಆಗಿರುವ ಕೊರಿಯರ್‌ನಲ್ಲಿ 5 ಪಾಸ್‌ಪೋರ್ಟ್‌, 5 ಎಟಿಎಂ ಕಾರ್ಡ್‌, 200 ಗ್ರಾಂ. ಎಂಡಿಎಂಎ ಹಾಗೂ 5000 ಯುಎಸ್‌ ಡಾಲರ್‌ವಿದ್ದು, ಕೋರಿಯರ್‌ ಮುಂಬಯಿಯ ಕಸ್ಟಮ್ಸ್‌ ಅಧಿಕಾರಿಗಳ ವಶದಲ್ಲಿ ಇರುವುದಾಗಿ ತಿಳಿಸಿ ಹೆದರಿಸಿದ್ದರು.

ಆ ಬಳಿಕ ಪೊಲೀಸ್‌ ಅಧಿಕಾರಿಯೆಂದು ನಂಬಿಸಿ ಡಾ. ಅರುಣ್‌ ಕುಮಾರ್‌ಗೆ ಕರೆ ಮಾಡಿ, ನಿಮ್ಮ ಆಧಾರ್‌ ಕಾರ್ಡ್‌ ದುರ್ಬಳಕೆಯ ಬಗ್ಗೆ ದೂರನ್ನು ಸ್ವೀಕರಿಸಲಾಗಿದ್ದು, ಆಧಾರ್‌ ಕಾರ್ಡ್‌ ಅನ್ನು ಭಯೋತ್ಪಾದಕರು ಸಿಮ್‌ ಖರೀದಿಸಲು ಬಳಸಿದ್ದಾರೆ. ಈ ದೂರಿಗೆ ಸಂಬಂಧಿಸಿ ನಿಮ್ಮನ್ನು “ವರ್ಚುವಲ್‌ನಲ್ಲಿ ಆರೆಸ್ಟ್‌’ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಅಲ್ಲದೇ ಜು. 29ರಿಂದ ಆ. 9ರ ವರೆಗೆ ಮನೆಯ ರೂಮ್‌ ಒಂದರಲ್ಲಿ ಇರುವಂತೆ ಹಾಗೂ ಬೇರೆಯವರೊಂದಿಗೆ ಯಾವುದೇ ಸಂಪರ್ಕ ಮಾಡದಂತೆ ಸೂಚಿಸಿದ್ದರು.

ಸೆನ್‌ ಅಪರಾಧ ಪೊಲೀಸ್‌ ಠಾಣೆಯ ಪೊಲೀಸ್‌ ನಿರೀಕ್ಷಕ ರಾಮಚಂದ್ರ ನಾಯಕ್‌ ಅವರ ನೇತೃತ್ವದಲ್ಲಿ ಎಸ್‌ಐ ಅಶೋಕ್‌, ಸಿಬಂದಿ ಪ್ರವೀಣ ಶೆಟ್ಟಿಗಾರ್‌, ರಾಜೇಶ್‌, ಅರುಣ ಕುಮಾರ್‌, ಯತೀನ್‌ ಕುಮಾರ್‌, ರಾಘವೇಂದ್ರ ಕಾರ್ಕಡ, ದೀಕ್ಷಿತ್‌, ಪ್ರಶಾಂತ್‌, ಮುತ್ತೆಪ್ಪ ಆಡೀನ್‌, ಮಾಯಪ್ಪ ಗಡದೆ, ಪರಶುರಾಮ ಮತ್ತು ಸುದೀಪ್‌ ಅವರನ್ನು ಒಳಗೊಂಡ ವಿಶೇಷ ತಂಡವು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.

ಈ ಪ್ರಕರಣವನ್ನು ಸರಿಪಡಿಸಲು ಅಪರಿಚಿತರು ಸೂಚಿಸಿದ ವಿವಿಧ ಬ್ಯಾಂಕ್‌ ಖಾತೆಗಳಿಗೆ ಹಣ ಪಾವತಿಸುವಂತೆ ತಿಳಿಸಿದ್ದು, ಅದರಂತೆ ಡಾ. ಅರುಣ್‌ ಕುಮಾರ್‌ ತಮ್ಮ ಖಾತೆಯಿಂದ ಆ. 6ರಿಂದ ಆ. 9ರ ವರೆಗೆ ಹಂತವಾಗಿ ಒಟ್ಟು 1,33,81,000 ರೂ. ಹಣವನ್ನು ವರ್ಗಾಯಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದರು. ಈ ಬಗ್ಗೆ ಡಾ. ಅರುಣ್‌ ಕುಮಾರ್‌ ಗೋವಿಂದ ಕರ್ನವರ್‌ ನೀಡಿದ ದೂರಿನಂತೆ ಉಡುಪಿ ಸೆನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

                        

                          

                        

                          

 

`

Leave a Reply

Your email address will not be published. Required fields are marked *