
ಹೆಬ್ರಿ,ಅ. 31: ಹೆಬ್ರಿಯ ಅನಂತಪದ್ಮನಾಭ ಫ್ರೆಂಡ್ಸ್(ರಿ) ಸಂಘವು ಕಳೆದ 15 ವರ್ಷಗಳಿಂದ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು, ಈ ಸಂಘದ ಸಾಧನೆಯನ್ನು ಗುರುತಿಸಿದ ಉಡುಪಿ ಜಿಲ್ಲಾಡಳಿತವು 2025ನೇ ಸಾಲಿನಲ್ಲಿ ಸಂಘ ಸಂಸ್ಥೆಗಳಿಗೆ ಕೊಡಮಾಡುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಅಯ್ಕೆ ಮಾಡಿದೆ.
ಶೇಖರ ಹೆಬ್ರಿ ಅಧ್ಯಕ್ಷತೆಯಲ್ಲಿ ಹೆಬ್ರಿಯ ಅನಂತಪದ್ಮನಾಭ ಫ್ರೆಂಡ್ಸ್ (ರಿ) ಸಂಸ್ಥೆಯು ಪ್ರತೀ ವರ್ಷ ಹೆಬ್ಬೇರಿ ಉತ್ಸವ ಎನ್ನುವ ವಿನೂತನ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ.
ಈ ಕಾರ್ಯಕ್ರಮದಲ್ಲಿ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಗೌರವಿಸುವ ಜೊತೆಗೆ ಅಶಕ್ತರಿಗೆ ನೆರವು ನೀಡುವ ಕಾರ್ಯವನ್ನು ಮಾಡುತ್ತಾ ಬಂದಿದೆ.
ಇದಲ್ಲದೇ ವೈದ್ಯಕೀಯ ಶಿಬಿರಗಳು, ಪರಿಸರ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಗಿಡ ನೆಡುವ ಕಾರ್ಯಕ್ರಮ, ಸ್ವಚ್ಚತಾ ಆಂದೋಲನ ನಡೆಸುವ ಮೂಲಕ ಸಾಮಾಜಿಕ ಜಾಗೃತಿ ಮೂಡಿಸುವ ಕೆಲಸ ಮಾಡುವ ಮೂಲಕ ಗಮನ ಸೆಳೆದಿದೆ.ಇದರ ಜೊತೆ ಈ ಸಂಘವು ಕನ್ನಡ ನಾಡು ನುಡಿ ,ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಕಾರ್ಯನಿರತವಾಗಿದೆ.
ಯಾವುದೇ ಆಡಂಬರದ ಪ್ರಚಾರವಿಲ್ಲದೇ ಸಾಹಿತ್ಯ ಹಾಗೂ ಸಮಾಜ ಸೇವಾ ಕೈಂಕರ್ಯ ಮಾಡುತ್ತಿರುವ ಅನಂತಪದ್ಮನಾಭ ಫ್ರೆಂಡ್ಸ್ ಸಾಧನೆಗೆ ಜಿಲ್ಲಾಡಳಿತವು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರಕ್ಕೆ ಆಯ್ಕೆ ಮಾಡಿರುವುದಕ್ಕೆ ಸಂಘದ ಅಧ್ಯಕ್ಷ ಶೇಖರ ಹೆಬ್ರಿ ಸಂತಸ ವ್ಯಕ್ತಪಡಿಸಿದ್ದಾರೆ.




