Share this news

ಉಡುಪಿ: ಉಡುಪಿ ಗಾಂಧಿನಗರದ ಬಂಗಲೆಯೊಂದರಲ್ಲಿ ಸೋಮವಾರ ಮುಂಜಾನೆ ಸಂಭವಿಸಿದ ಅಗ್ನಿದುರಂತದಲ್ಲಿ ಶೆಟ್ಟಿ ಲಂಚ್ ಹೋಮ್ ಮಾಲಕ ಉದ್ಯಮಿ ರಮಾನಂದ ಶೆಟ್ಟಿ ದಾರುಣವಾಗಿ ಮೃತಪಟ್ಟಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಅವರ ಪತ್ನಿ, ಬಿಜೆಪಿ ನಾಯಕಿ ಬಳ್ಳಾಲ್ ಕಾಬೂಸ್ ರೀಲ್ಸ್ ಮಾಡುತ್ತಿದ್ದ ಅಶ್ವಿನಿ ಶೆಟ್ಟಿ ಕೂಡ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಈ ದುರ್ಘಟನೆಯಲ್ಲಿ ಇಬ್ಬರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದು ಇದೀಗ ಅಪ್ಪ ಅಮ್ಮನನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಸೆಂಟ್ರಲೈಸ್ ಎಸಿ ಶಾರ್ಟ್ ಸರ್ಕ್ಯೂಟ್ ನಿಂದ ಬ್ಲಾಸ್ಟ್ ಆಗಿ ಅಗ್ನಿ ಅವಘಡ ಸಂಭವಿಸಿತ್ತು ಎನ್ನಲಾಗಿದೆ. ಎಸಿ ಶಾರ್ಟ್ ಸರ್ಕ್ಯೂಟ್ ಇಡೀ ಮನೆಯನ್ನು ಆಹುತಿ ಪಡೆದಿತ್ತು.

ನಗರದ ಅಂಬಲಪಾಡಿಯಲ್ಲಿ ಶೆಟ್ಟಿ ಲಂಚ್ ಹೋಮ್ ನಡೆಸುತ್ತಿದ್ದ ರಮಾನಂದ ಶೆಟ್ಟಿ ಉಡುಪಿ ನಗರ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಅಶ್ವಿನಿ ಶೆಟ್ಟಿ ಮತ್ತು ಮಕ್ಕಳಾದ ಎಂಜಿನಿಯರಿಂಗ್‌ ವಿದ್ಯಾರ್ಥಿನಿ ಅಂಶುಲಾ ಶೆಟ್ಟಿ ಹಾಗೂ 8ನೇ ತರಗತಿ ವಿದ್ಯಾರ್ಥಿ ಅಭಿಕ್ ಶೆಟ್ಟಿ ಅವರೊಂದಿಗೆ ವಾಸಿಸುತ್ತಿದ್ದರು. ಅಶ್ವಿನಿ ಶೆಟ್ಟಿ ಸನಾತನ ಸಂಸ್ಕೃತಿ, ಸಂಸ್ಕಾರಗಳ ಬಗ್ಗೆ ಮಗನೊಂದಿಗೆ ರೀಲ್ಸ್ ಮಾಡಿ ಪ್ರಸಿದ್ಧಿಯಾಗಿದ್ದರು.ಸನಾತನ ಆಚರಣೆಗಳ ಕುರಿತ ರೀಲ್ಸ್ ನಿಂದ 1 ಲಕ್ಷದಷ್ಟು ಫಾಲೋವರ್ಸ್ ಅನ್ನು ಇನ್ಸ್ಟಾಗ್ರಾಮ್ ನಲ್ಲಿ ಪಡೆದಿದ್ದರು. ಸಂಪೂರ್ಣ ಹವಾನಿಯಂತ್ರಿತವಾದ ಈ ಬಂಗಲೆಯಲ್ಲಿ ಮುಂಜಾನೆ 5.30ರ ಸುಮಾರಿಗೆ ದಟ್ಟ ಹೊಗೆ ತುಂಬಿಕೊಂಡಿತು. ಅಕ್ಕಪಕ್ಕದವರು ಇದನ್ನು ಗಮನಿಸಿ ಧಾವಿಸಿದಾಗ ಬೆಂಕಿ ಬಂಗಲೆಯೊಳಗೆ ವ್ಯಾಪಿಸಿತ್ತು. ತಕ್ಷಣ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ, ಹರಸಾಹಸದಿಂದ ಬೆಂಕಿಯನ್ನು ನಂದಿಸಿ ಬಾಗಿಲು ಒಡೆದು ಒಳಹೊಕ್ಕು ಒಂದು ಬೆಡ್ ರೂಮ್‌ನಲ್ಲಿ ಹೊರ ಬರಲಾಗದೇ ಕೂಗುತ್ತಿದ್ದ ಮಕ್ಕಳಿಬ್ಬರನ್ನು ಹೊರಗೆ ಕರೆ ತಂದರು. ಇನ್ನೊಂದು ಬೆಡ್ ರೂಮ್‌ನಲ್ಲಿದ್ದ ದಂಪತಿ ಹೊಗೆಯಿಂದ ಉಸಿರುಗಟ್ಟಿ ಅರೆ ಪ್ರಜ್ಞಾವಸ್ಥೆಯಲ್ಲಿದ್ದರು. ಅವರನ್ನು ತಕ್ಷಣ ಮಣಿಪಾಲದ ಕೆ.ಎಂ.ಸಿ. ಆಸ್ಪತ್ರೆಗೆ ರವಾನಿಸಲಾಯಿತು.

ಆದರೆ ರಮಾನಂದ ಶೆಟ್ಟಿ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಅಶ್ವಿನಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಅವರು ಕೂಡ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ದುರ್ಘಟನೆ ಬಳಿಕ ಬೆಂಕಿ ಕೆನ್ನಾಲೆಗೆ ಉಸಿರಾಡಲು ಸಾಧ್ಯವಾಗದೇ ಮೆದುಳು ಹಾಗೂ ಶ್ವಾಸಕೋಶ ಬ್ಲಾಕ್ ಆಗಿ ಸೋಮವಾರ ತಡರಾತ್ರಿ ಮೃತಪಟ್ಟಿದ್ದಾರೆ. ಇಬ್ಬರು ಮಕ್ಕಳು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಬಂಗಲೆ ಸಂಪೂರ್ಣ ಹವಾನಿಯಂತ್ರಿತವಾಗಿದ್ದು, ಮನೆಯ ಒಳಗೋಡೆ ಸಹಿತವಾಗಿ ಸಂಪೂರ್ಣ ಮರವನ್ನು ಬಳಸಿ ನಿರ್ಮಿಸಲಾಗಿತ್ತು. ಏರ್ ಕಂಡಿಷನ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಅವಘಡ ಸಂಭವಿಸಿರುವುದು ದೃಢಪಟ್ಟಿದೆ.

ರೀಲ್ಸ್ ಮೂಲಕ ಜನಜಾಗೃತಿ:
ಯಶಸ್ವಿ ಉದ್ಯಮಿಯಾಗಿದ್ದ ರಮಾನಂದ ಶೆಟ್ಟಿ ಮತ್ತು ಅಶ್ವಿನಿ ಹೈಸ್ಕೂಲು ದಿನಗಳಿಂದಲೇ ಪ್ರೀತಿಸಿ ಮದುವೆಯಾಗಿದ್ದರು. ಅಪ್ಪಟ ಸನಾತನ ಸಂಸ್ಕಾರ ಪ್ರಿಯರಾಗಿದ್ದ ಅಶ್ವಿನಿ ಶೆಟ್ಟಿ, ಸಾಮಾಜಿಕ ಜಾಲತಾಣಗಳ್ಲಲಿ ರೀಲ್ಸ್‌ಗಳ ( ಬಲ್ಲಾಳ್ ಕಾಬೂಸ್-Ballal’s Caboose) ಮೂಲಕ ಹಿಂದೂ ಧರ್ಮ, ಸಂಸ್ಕೃತಿ, ಆಚಾರ ವಿಚಾರಗಳನ್ನು ಹೇಳುತ್ತಾ ತನ್ನದೇ ಅಭಿಮಾನಿ ಬಳ‍ಗವನ್ನು ಹೊಂದಿದ್ದರು. ಬಿಜೆಪಿಯಲ್ಲಿ ಸಕ್ರಿಯರಾಗಿದ್ದ ಅವರು, ಸಾಮಾಜಿಕ ಕ್ಷೇತ್ರ, ಸಾಹಿತ್ಯ, ನೃತ್ಯ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದರು.ಇವರ ಅಕಾಲಿಕ ಸಾವಿಗೆ ಸಾವಿರಾರು ಅಭಿಮಾನಿಗಳು ದಿಗ್ಭ್ರಮೆಗೊಂಡಿದ್ದಾರೆ

                        

                          

                        

                          

 

Leave a Reply

Your email address will not be published. Required fields are marked *