ಉಡುಪಿ: ಹಿಂದೂ ಧರ್ಮ ಹಾಗೂ ರಾಮ ಮಂದಿರದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಲ್ಲದೇ, ಇಸ್ಲಾಂಗೆ ಮತಾಂತರವಾಗುವಂತೆ ಸಹಪಾಠಿಗೆ ಕಿರುಕುಳ ನೀಡಿದ ಆರೋಪದ ಮೇಲೆ ವೈದ್ಯಕೀಯ ವಿದ್ಯಾರ್ಥಿ ವಿರುದ್ಧ ಉಡುಪಿ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ. ಕಿರುಕುಳ ನೀಡಿದ ಆರೋಪಿ ವೈದ್ಯಕೀಯ ವಿದ್ಯಾರ್ಥಿ ಮಹಮ್ಮದ್ ಡ್ಯಾನಿಷ್ ಖಾನ್ (27) ನನ್ನು ಪೊಲೀಸರು ಬಂಧಿಸಿದ್ದು ಆರೋಪಿಗೆ ನ್ಯಾಯಾಲಯ ನ್ಯಾಯಂಗ ಬಂಧನ ವಿಧಿಸಿದೆ.
ಆರೋಪಿ ಮಹಮ್ಮದ್ ಡ್ಯಾನಿಷ್ ಖಾನ್ ಹೊರ ರಾಜ್ಯದವನಾಗಿದ್ದು, ಮಣಿಪಾಲ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿದ್ದನು. ಈ ವೇಳೆ ತನ್ನ ಜೊತೆ ಓದುತ್ತಿದ್ದ ವೈದ್ಯಕೀಯ ವಿದ್ಯಾರ್ಥಿನಿಯ ಜೊತೆ ಸ್ನೇಹ ಬೆಳೆಸಿದ್ದಾನೆ. ಆಕೆಯೂ ಹೊರ ರಾಜ್ಯದವಳು. ಇಬ್ಬರ ನಡುವೆ ಸ್ನೇಹ ಬೆಳೆದ ನಂತರ, ಪರಸ್ಪರ ಫೋನ್ ನಂಬರ್ ಬದಲಾಯಿಸಿಕೊಂಡಿದ್ದಾರೆ .
ಇದೇ ವರ್ಷ ಜನವರಿ 22 ರಂದು ರಾಮ ಮಂದಿರ ಉದ್ಘಾಟನೆ ವೇಳೆ ಆರೋಪಿ ಮಹಮ್ಮದ್ ಡ್ಯಾನಿಷ್ ಖಾನ್, ಆಕೆಯ ಎದುರು ಹಿಂದೂ ಧರ್ಮ ಹಾಗೂ ರಾಮ ಮಂದಿರದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಬಳಿಕ, ಮಾರ್ಚ್ 11 ರಂದು ಆರೋಪಿ ಮಹಮ್ಮದ್ ಡ್ಯಾನಿಷ್ ಖಾನ್, ತನ್ನ ರೂಮ್‌ಗೆ ಹೋಗಿದ್ದ ವೇಳೆ ಆಕೆ ಮುಸ್ಲಿಂ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಾಯಿಸಿದ್ದಾನೆ. ಆಗ, ನಿರಾಕರಿಸಿದಾಗ ಆರೋಪಿ ಮಹಮ್ಮದ್ ಡ್ಯಾನಿಷ್ ಖಾನ್, ಆಕೆಯ ಕೆನ್ನೆಗೆ ಹೊಡೆದು, ಕೂದಲು ಹಿಡಿದು ಎಳೆದಿದ್ದಾನೆ. ಅಲ್ಲದೇ, ದೇಹದ ಖಾಸಗಿ ಭಾಗವನ್ನು ಮುಟ್ಟಿ ಲೈಂಗಿಕತೆಗೆ ಬೇಡಿಕೆ ಇಟ್ಟಿದ್ದಾನೆ. ನಿರಂತರವಾಗಿ, ಪೋನ್‌ನಲ್ಲಿ ಕಿರುಕುಳ ಕೊಡಲು ಆರಂಭಿಸಿದ್ದಾನೆ ಮತ್ತು ಆಕೆಯ ವೀಡಿಯೋಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ವಿದ್ಯಾರ್ಥಿನಿ ದೂರಿನಲ್ಲಿ ದಾಖಲಿಸಿದ್ದಾಳೆ.
ಈತನ ಕಿರುಕುಳದಿಂದ ರೋಸಿ ಹೋದ ವಿದ್ಯಾರ್ಥಿನಿ ಆಗಸ್ಟ್ 31 ರಂದು ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಕೂಡಲೆ ಪೊಲೀಸರು ಆರೋಪಿ ಮಹಮ್ಮದ್ ಡ್ಯಾನಿಷ್ ಖಾನ್‌ನನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯ ಆರೋಪಿ ಮಹಮ್ಮದ್ ಡ್ಯಾನಿಷ್ ಖಾನ್‌ಗೆ ನ್ಯಾಯಾಂಗ ಬಂಧನ ವಿಧಿಸಿದೆ.