ಕಾರ್ಕಳ: ಮಂಗಳೂರು ಕಾರ್ಕಳ ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಸಂದರ್ಭದಲ್ಲಿ ಅವೈಜ್ಞಾನಿಕ ಕಾಮಗಾರಿಯಿಂದ ಕಾರ್ಕಳ ತಾಲೂಕಿನ ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮುರತ್ತಂಗಡಿ ಶುಂಠಿಗುಡ್ಡೆ ಸಂಪರ್ಕ ರಸ್ತೆ ಸಂಪೂರ್ಣವಾಗಿ ಜಲಾವೃತವಾಗಿದೆ.
ಶನಿವಾರ ಮುಂಜಾನೆ ಸುರಿದ ಭಾರೀ ಮಳೆಗೆ ಮುರತಂಗಡಿ- ಶುಂಠಿಗುಡ್ಡೆ ಅಡ್ಡರಸ್ತೆಯಲ್ಲಿ ಕೃತಕ ನೆರೆಯಿಂದ ರಸ್ತೆಯಲ್ಲಿ ನೀರು ತುಂಬಿ ವಾಹನ ಸಂಚಾರಕ್ಕೆ ಹಾಗೂ ಪ್ರಯಾಣಿಕರಿಗೆ ನಡೆದಾಡಲು ತೀವ್ರ ತೊಂದರೆ ಉಂಟಾಗಿದೆ. ಇದಲ್ಲದೇ ಪ್ರಕೃತಿ ನ್ಯಾಷನಲ್ ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೂ ತುಂಬಾ ತೊಂದರೆಯಾಗಿದೆ.
ಮಧ್ಯಪ್ರದೇಶ ಮೂಲದ ದಿಲೀಪ್ ಬಿಲ್ಡ್ ಕಾನ್ ಸಂಸ್ಥೆಯ ತೀರಾ ಅವೈಜ್ಞಾನಿಕ ಹಾಗೂ ಬೇಜವಾಬ್ದಾರಿಯುತ ಕಾಮಗಾರಿಗೆ ಮುರತ್ತಂಗಡಿ ಪರಿಸರದ ಜನತೆ ಹೆದ್ದಾರಿ ಇಲಾಖೆಗೆ ಜನಪ್ರತಿನಿಧಿಗಳಿಗೆ ಹಾಗೂ ಗುತ್ತಿಗೆದಾರ ಕಂಪೆನಿಗೆ ಹಿಡಿಶಾಪ ಹಾಕಿದ್ದಾರೆ.
ಒಂದು ವಾರದ ಒಳಗೆ ಸರಾಗವಾಗಿ ಮಳೆ ನೀರು ಹರಿದು ಹೋಗಲು ಸೂಕ್ತವಾದ ಚರಂಡಿ ವ್ಯವಸ್ಥೆ ಮಾಡಿಕೊಡದಿದ್ದರೆ ಚುನಾವಣೆಯ ಬಳಿಕ ನಾಗರಿಕರು ಬೃಹತ್ ಪ್ರತಿಭಟನೆಗೆ ಸಜ್ಜಾಗಲಿದ್ದಾರೆ ಎಂದು ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಪ್ರಮುಖರು ಹಾಗೂ ಸಾಣೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸಾಣೂರು ನರಸಿಂಹ ಕಾಮತ್ ಎಚ್ಚರಿಸಿದ್ದಾರೆ.