ನವದೆಹಲಿ: ಜಗತ್ತಿನ ಅತ್ಯಂತ ಮಾರಕ ಕಾಯಿಲೆಗಳಲ್ಲಿ ಕ್ಯಾನ್ಸರ್ ಒಂದು. ಒಮ್ಮೆ ಇದು ಶುರುವಾಗಿ ಬಿಟ್ಟರೆ ದೇಹವನ್ನು ಹಂತಹಂತವಾಗಿ ಸಾಯಿಸುತ್ತಾ ಹೋಗುವಂತಹ ರೋಗ ಇದು. ರಷ್ಯಾದ ವಿಜ್ಞಾನಿಗಳು ಈ ಮಾರಕ ಕ್ಯಾನ್ಸರ್‌ಗೆ ಲಸಿಕೆ ಕಂಡು ಹಿಡಿದಿದ್ದು, ಎಲ್ಲಾ ಪ್ರೀಕ್ಲಿನಿಕಲ್ ಟ್ರಯಲ್ಗಳೂ ಮುಗಿದು ಈಗ ಇದು ಮನುಷ್ಯಬಳಕೆಗೆ ಲಭ್ಯ ಇದೆ ಎಂದು ವರದಿಗಳು ಹೇಳುತ್ತಿವೆ. ಎಆರ್‌ಎನ್‌ಎ ಆಧರಿತ ಈ ವ್ಯಾಕ್ಸಿನ್ ಪೂರ್ವ ಕ್ಲಿನಿಕಲ್ ಟ್ರಯಲ್‌ನಲ್ಲಿ ಶೇ.100ರಷ್ಟು ಪರಿಣಾಮಕಾರಿ ಮತ್ತು ಸುರಕ್ಷಿತ ಎಂದು ಸಾಬೀತಾಗಿದೆ.
ರಷ್ಯಾ ಸರ್ಕಾರ ಇನ್ನಷ್ಟೇ ಈ ವ್ಯಾಕ್ಸಿನ್‌ಗೆ ಅಂತಿಮ ಒಪ್ಪಿಗೆ ನೀಡಬೇಕಿದೆ. ಅನುಮೋದನೆ ಸಿಕ್ಕರೆ ಇದು ವಿಶ್ವದ ಮೊದಲ ಕ್ಯಾನ್ಸರ್ ಲಸಿಕೆ ಆಗಲಿದೆ ಎಂದು ಹೇಳಲಾಗುತ್ತಿದೆ.
‘ಎಂಟರೋಮಿಕ್ಸ್’ ಹೆಸರಿನ ಈ ವ್ಯಾಕ್ಸಿನ್ ಅನ್ನು ಪೂರ್ವ ಕ್ಲಿನಿಕಲ್ ಟ್ರಯಲ್‌ನಲ್ಲಿ ದೊಡ್ಡ ಕ್ಯಾನ್ಸರ್ ಟ್ಯೂಮರ್‌ಗಳನ್ನು ಹೊಂದಿರುವ ರೋಗಿಗಳ ಮೇಲೆ ಪ್ರಯೋಗ ಮಾಡಲಾಗಿದೆ. ಈ ವೇಳೆ ಕ್ಯಾನ್ಸರ್ ನಾಶ ಮಾಡುವ ಮೂಲಕ ಟ್ಯೂಮರ್‌ನ ಗಾತ್ರವನ್ನೂ ಕುಗ್ಗಿಸುವಲ್ಲಿ ವ್ಯಾಕ್ಸಿನ್ ಯಶಸ್ವಿಯಾಗಿದೆ ಎಂದು ಈ ವ್ಯಾಕ್ಸಿನ್ ಅಭಿವೃದ್ಧಿಪಡಿಸಿದ ಫೆಡರಲ್ ಮೆಡಿಕಲ್ ಆ್ಯಂಡ್ ಬಯೋಲಾಜಿಕಲ್ ಏಜೆನ್ಸಿ (ಎಫ್‌ಎಂಬಿಎ) ಹೇಳಿದೆ.
ಈ ವ್ಯಾಕ್ಸಿನ್ ಅಭಿವೃದ್ಧಿಪಡಿಸಿದ ಫೆಡರಲ್ ಮೆಡಿಕಲ್ ಆ್ಯಂಡ್ ಬಯೋಲಾಜಿಕಲ್ ಏಜೆನ್ಸಿ(ಎಫ್‌ಎಂಬಿಎ)ಯ ಮುಖ್ಯಸ್ಥೆ ವೆರೋನಿಕಾ ಸ್ಕೊವತ್ಸೋವಾ ಪ್ರಕಾರ, ’ಮೂರು ವರ್ಷಗಳ ಪೂರ್ವ ಕ್ಲಿನಿಕಲ್ ಟ್ರಯಲ್ ಸೇರಿ ಹಲವು ವರ್ಷಗಳ ಸಂಶೋಧನೆ ಬಳಿಕ ಈ ವ್ಯಾಕ್ಸಿನ್ ಅಭಿವೃದ್ಧಿಪಡಿಸಲಾಗಿದೆ. ಕ್ಲಿನಿಕಲ್ ಟ್ರಯಲ್‌ನಲ್ಲಿ ಪದೇ ದೇದೆ ರೋಗಿಗಳಿಗೆ ಈ ವ್ಯಾಕ್ಸಿನ್ ನೀಡಿದರೂ ಸುರಕ್ಷಿತ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂಬುದು ಸಾಬೀತಾಗಿದೆ. ಕೆಲ ಪ್ರಕರಣಗಳಲ್ಲಿ ಕ್ಯಾನ್ಸರ್ ಗೆಡ್ಡೆಯ ಬೆಳವಣಿಗೆ ಶೇ.60ರಿಂದ ಶೇ.80ರಷ್ಟು ನಿಧಾನಗೊಂಡಿದೆ. ಇದು ಕ್ಯಾನ್ಸರ್‌ನಿಂದ ಕ್ಯಾನ್ಸರ್‌ಗೆ ಭಿನ್ನವಾಗಿರುತ್ತದೆ’ ಎಂದು ಹೇಳಿದ್ದಾರೆ.