Share this news

ಬೆಂಗಳೂರು : ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಖಾತೆಯಿಂದ ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು ಪ್ರಕರಣದ ಆರೋಪಿ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕನ ಆಪ್ತನ ಬಳಿ 30 ಲಕ್ಷ ರೂ. ನಗದು ಜಪ್ತಿ ಮಾಡಿದ್ದಾರೆ.

ಈಗಾಗಲೇ ಮಾಜಿ ವ್ಯವಸ್ಥಾಪಕ ನಿರ್ದೇಶಕ ಜೆ.ಜಿ.ಪದ್ಮನಾಭ ಬಳಿ 3.62 ಕೋಟಿ ರೂ. ನಗದನ್ನು ಎಸ್‌ಐಟಿ ಅಧಿಕಾರಿಗಳು ಜಪ್ತಿ ಮಾಡಿದ್ದರು. ಇದೀಗ ಆತನ ಆಪ್ತನ ಬಳಿ ಮತ್ತೆ 30 ಲಕ್ಷ ರು. ನಗದು ಜಪ್ತಿ ಮಾಡಿದ್ದಾರೆ. ಈ ಪ್ರಕರಣದಲ್ಲಿ ಎಸ್‌ಐಟಿ ಈವರೆಗೆ ಒಟ್ಟು 12.13 ಕೋಟಿ ರು. ನಗದು ಜಪ್ತಿ ಮಾಡಿದಂತಾಗಿದೆ. ನಿಗಮದ ಖಾತೆಯಿಂದ ಹಣ ಅಕ್ರಮ ವರ್ಗಾವಣೆ ಸಂಬಂಧ ಎಸ್ಐಟಿ ಅಧಿಕಾರಿಗಳು ಈಗಾಗಲೇ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಜೆ.ಜಿ.ಪದ್ಮನಾಭನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆ ವೇಳೆ ಆತ ನೀಡಿದ ಮಾಹಿತಿ ಮೇರೆಗೆ ಹಣ ಜಪ್ತಿಗೆ ಮುಂದಾಗಿದ್ದಾರೆ.

ಈ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಹೈದರಾಬಾದ್‌ ಗ್ಯಾಂಗ್‌ ಪ್ರಮುಖ ಪಾತ್ರ ವಹಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈಗಾಗಲೇ ಎಸ್‌ಐಟಿ ಅಧಿಕಾರಿಗಳು ಈ ಹೈದರಾಬಾದ್‌ ಗ್ಯಾಂಗ್‌ನ ಸತ್ಯನಾರಾಯಣ ವರ್ಮಾ, ಸತ್ಯನಾರಾಯಣ, ಚಂದ್ರಮೋಹನ್‌, ಜಗದೀಶ್‌ ಎಂಬುವವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ನಕಲಿ ಖಾತೆಗಳಿಂದ ಹೈದರಾಬಾದ್‌, ಬೆಂಗಳೂರಿನ ಮದ್ಯದಂಗಡಿ, ಚಿನ್ನಾಭರಣ ಮಾರಾಟ ಮಳಿಗೆಗಳು, ಬಾರ್‌ಗಳು ಸೇರಿದಂತೆ ನೂರಕ್ಕೂ ಅಧಿಕ ಖಾತೆಗಳಿಗೆ ಹಣ ವರ್ಗಾವಣೆಯಾಗಿದೆ. ಬಳಿಕ ಆರೋಪಿಗಳು ಈ ಹಣವನ್ನು ಡ್ರಾ ಮಾಡಿ ಮಾಡಿಕೊಂಡಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಬೆಂಗಳೂರಿನಲ್ಲಿ ಯಾರೆಲ್ಲಾ ಈ ಹಣ ಡ್ರಾ ಮಾಡಿದ್ದಾರೆ ಎಂಬುದರ ಪತ್ತೆಗೆ ಎಸ್ಐಟಿ ಅಧಿಕಾರಿಗಳು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಹೈದರಾಬಾದ್‌ ಗ್ಯಾಂಗ್‌ನ ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

 

 

 

                        

                          

 

 

 

 

 

                        

                          

 

 

Leave a Reply

Your email address will not be published. Required fields are marked *