Share this news

ವಿಜಯಪುರ: ರಾಜ್ಯದಲ್ಲಿ ಕೊಳವೆಬಾವಿಗೆ ಮಗುಬಿದ್ದ ಪ್ರಕರಣಗಳು ಮಾಸುವ ಮುನ್ನವೇ ವಿಜಯಪುರ ಜಿಲ್ಲೆಯ ಲಚ್ಯಾಣ ಗ್ರಾಮದಲ್ಲಿ ಮತ್ತೊಂದು ಕೊಳವೆ ಬಾವಿ ಅವಘಡ ಸಂಭವಿಸಿದ್ದು, ಎರಡು ವರ್ಷದ ಬಾಲಕ ಆಟವಾಡುತ್ತಾ ತೆರೆದ ಕೊಳವೆ ಬಾವಿಗೆ ಬಿದ್ದಿರುವ ಆಘಾತಕಾರಿ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.
ಲಚ್ಯಾಣ ಗ್ರಾಮದ ಸತೀಶ್ ಮತ್ತು ಪೂಜಾ ದಂಪತಿಯ ಮಗನಾಗಿರುವ ಸಾತ್ವಿಕ್ ಬುಧವಾರ ಸಂಜೆ 6 ಗಂಟೆ ಸುಮಾರಿಗೆ ಆಟವಾಡುತ್ತ ಮನೆಯ ಪಕ್ಕದಲ್ಲಿ ಕೊರೆಯಲಾಗಿದ್ದ ನಿರುಪಯುಕ್ತ ಕೊಳವೆ ಬಾವಿಗೆ ಬಿದ್ದಿದ್ದಾನೆ. ಮಗು ಕೊಳವೆ ಬಾವಿಗೆ ಬಿದ್ದ ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಇಂಡಿ ಗ್ರಾಮಾಂತರ ಠಾಣೆಯ ಪೊಲೀಸರು, ಅಗ್ನಿ ಶಾಮಕ ದಳ, ತಾಲೂಕು ಆಡಳಿತಾಧಿಕಾರಿಗಳು ದೌಡಾಯಿಸಿದ್ದು, ರಕ್ಷಣಾ ಕಾರ್ಯಚರಣೆಯಲ್ಲಿ ತೊಡಗಿದ್ದಾರೆ. 2 ಬೃಹತ್ ಜೆಸಿಬಿ ಯಂತ್ರಗಳ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ.

ದುರಂತವೆAದರೆ ಮಗುವಿನ ಅಜ್ಜ ಶಂಕರಪ್ಪ ಮುಜಗೊಂಡ ಎಂಬವರು ಮಂಗಳವಾರವಷ್ಟೇ ಕೊಳವೆ ಬಾವಿ ಕೊರೆಸಿದ್ದರು. ನೀರು ಬಾರದ ಹಿನ್ನಲೆಯಲ್ಲಿ ಮುಚ್ಚದೇ ಹಾಗೆಯೇ ಬಿಟ್ಟಿರುವುದು ಈ ದುರಂತಕ್ಕೆ ಕಾರಣವಾಗಿದೆ.ಆಟವಾಡುತ್ತಿದ್ದ ಬಾಲಕ 20 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದು, ಮಗುವಿಗೆ ಪೈಪ್ ಮೂಲಕ ಆಮ್ಲಜನಕ ಪೂರೈಸಲಾಗುತ್ತಿದ್ದು ಮಗು ಜೀವಂತವಾಗಿದ್ದು, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ನಿರಂತರವಾಗಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಬಾಲಕ ಸಾತ್ವಿಕ್ ರಕ್ಷಣೆಗೆ ಹರಸಾಹಸ

ಮಗು ರಕ್ಷಣೆಗಾಗಿ ಕಾರ್ಯಾಚರಣೆ ನಡೆಸಿರುವ ಸಿಬ್ಬಂದಿ ಹಿಟಾಚಿ ಯಂತ್ರವನ್ನು ಬಳಸಿ ಕೊಳವೆಬಾವಿ ಸುತ್ತಲೂ ಅಗೆಯುವ ಕೆಲಸ ಮುಂದುವರೆಸಿದ್ದಾರೆ. ಕೊಳವೆ ಬಾವಿಯ 5 ಅಡಿ ದೂರದಲ್ಲಿ ಮಣ್ಣು ತೆರವು ಮಾಡಲು ಕಾರ್ಯಾಚರಣೆ ಮುಂದುವರಿದಿದೆ. 20 ಅಡಿಯ ವರೆಗೆ ಡಿಗ್ಗಿಂಗ್ ಮಾಡಿ ಬಳಿಕ, ರಂಧ್ರ ಕೊರೆದು, ಮಗು ಇರುವ ಜಾಗ ತಲುಪಲು ಕಾರ್ಯಾಚರಣೆ ನಡೆಸಲಾಗುತ್ತಿದೆ. ಹಿಟಾಚಿ ಕಾರ್ಯಾಚರಣೆಗೆ ಕಲ್ಲು ಬಂಡೆ ಅಡ್ಡಿಯಾದ ಹಿನ್ನೆಲೆ ಬ್ರೇಕರ್ ಮೂಲಕ ಕಲ್ಲು ಒಡೆಯುವ ಕಾರ್ಯವೂ ಚಾಲ್ತಿಯಲ್ಲಿದೆ. ಕ್ಯಾಮೆರಾ ಬಿಟ್ಟು ಮಗುವಿನ ಚಲನವಲನದ ಮೇಲೆ ನಿಗಾ ಇಡುವುದು, ಆತನಿಗೆ ನೀರು ಸೇರಿ ಅಗತ್ಯ ವಸ್ತುಗಳನ್ನು ಪೂರೈಸಲು ಸಾಧ್ಯವೇ ಎಂಬುದನ್ನು ಪರಿಶೀಲಿಸಲಾಗುತ್ತದೆ.
ಬುಧವಾರ ರಾತ್ರಿಯಿಂದ ನಿರಂತರವಾಗಿ ಕಾರ್ಯಾಚರಣೆ ನಡೆಸಲಾಗುತ್ತಿದ್ದು ಗುರುವಾರ ಮುಂಜಾನೆ ವೇಳೆಗೆ ಕಾರ್ಯಾಚರಣೆ ಮುಗಿಯುವ ಸಾಧ್ಯತೆಯಿದ್ದು ಮಗು ಜೀವಂತವಾಗಿ ಹೊರಬರಲಿ ಎನ್ನುವುದೇ ಎಲ್ಲರ ಆಶಯವಾಗಿದೆ

 

Leave a Reply

Your email address will not be published. Required fields are marked *