Share this news

ಬೆಂಗಳೂರು : ವಕ್ಫ್ ಮಂಡಳಿಯು ಆಸ್ತಿ ಒತ್ತುವರಿ ಮಾಡುವ ನೆಪದಲ್ಲಿ ರಾಜ್ಯದ ರೈತರ ಭೂಮಿ‌ ಕಬಳಿಸಲು ಮುಂದಾಗಿದ್ದು,ಇದು ಆಕಸ್ಮಿಕವೂ ಅಲ್ಲ, ಕಣ್ತಪ್ಪಿನ ಕಾರ್ಯವೂ ಅಲ್ಲ.ಇದೊಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವ್ಯವಸ್ಥಿತ ಷಡ್ಯಂತ್ರ ಎಂದು ಮಾಜಿ ಸಚಿವ,ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ.ಸುನೀಲ್ ಕುಮಾರ್ ಆರೋಪಿಸಿದ್ದಾರೆ.

ರಾಜ್ಯ ಸರ್ಕಾರದ ಹಿಂದಿನ ಅಭಿವೃದ್ಧಿ ಆಯುಕ್ತರಾಗಿದ್ದ ಶಾಲಿನಿ ರಜನೀಶ್ ಅವರು ಕಳೆದ ಏಪ್ರಿಲ್ ತಿಂಗಳಲ್ಲಿ ಕಂದಾಯ ಇಲಾಖೆ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು 21,767 ಎಕರೆ ವಕ್ಫ್ ಭೂಮಿಯನ್ನು ವಶಪಡಿಸಿಕೊಳ್ಳುವಂತೆ ಸೂಚನೆ ನೀಡಿದ್ದರು. ಈ ಸಂಬಂಧ ಕಂದಾಯ ಹಾಗೂ ವಕ್ಫ್ ಇಲಾಖೆ ಜಂಟಿ ಸಭೆ ನಡೆಸಿತ್ತು.ಸಿದ್ದರಾಮಯ್ಯನವರ ಸೂಚನೆಯಿಲ್ಲದೇ ಅಧಿಕಾರಿಗಳು ಇಂಥ ದರಿದ್ರ ನಿರ್ಣಯ ತೆಗದುಕೊಳ್ಳಲು ಸಾಧ್ಯವಿತ್ತೇ ? ಎಂದು ಪ್ರಶ್ನಿಸಿದ್ದಾರೆ.
ಈಗ ಪರಿಸ್ಥಿತಿ ವಿಕೋಪಕ್ಕೆ ಹೋದ ನಂತರ ಬಿಜೆಪಿಯವರು ಅನಗತ್ಯ ರಾಜಕಾರಣ ನಡೆಸುತ್ತಿದ್ದಾರೆ ಎಂದು ಸಿದ್ದರಾಮಯ್ಯನವರು ಬುರುಡೆ ಬಿಡುತ್ತಿದ್ದಾರೆ. ಇಷ್ಟೆಲ್ಲಾ ಸ್ಪಷ್ಟೀಕರಣ ನೀಡುವ ಮೊದಲು ಶಾಲಿನಿ ರಜನೀಶ್ ಅವರು ರಾಜೇಂದ್ರ ಕುಮಾರ್ ಕಟಾರಿಯಾ ಅವರಿಗೆ ಪತ್ರ ಬರೆದಿದ್ದು ಸತ್ಯವೋ, ಸುಳ್ಳೋ ಎಂಬುದನ್ನು ನೀವು ಸ್ಪಷ್ಟಪಡಿಸಿ. ಆಗ ನಿಮ್ಮ ಸರ್ಕಾರದ ಜಿಹಾದಿ ನೀತಿ ಬಟಾಬಯಲಾಗುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಅಬಕಾರಿ ಸಚಿವರ ರಾಜೀನಾಮೆಗೆ ಆಗ್ರಹ: ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ್ ರಾಜೀನಾಮೆಗೆ ಆಗ್ರಹಿಸಿರುವ ಸುನಿಲ್ ಅವರು, ಹಲೋ ಅಪ್ಪಾದಿಂದ ಪ್ರಾರಂಭವಾದ ರಾಜ್ಯ ಕಾಂಗ್ರೆಸ್ ಸರ್ಕಾರದ ವರ್ಗಾವಣೆ ವ್ಯವಹಾರ ಈಗ ಅಬಕಾರಿ ಇಲಾಖೆ ಸಚಿವ ತಿಮ್ಮಾಪುರ್ ವರೆಗೆ ಬಂದು ನಿಂತಿದೆ.
ವರ್ಗಾವಣೆ ವ್ಯವಹಾರ, ಲೈಸೆನ್ಸ್ ಗೆ ಕಾಸು, ಸನ್ನದುದಾರರಿಂದ ತಿಂಗಳ ಕಲೆಕ್ಷನ್ ಸೇರಿದಂತೆ ಅಬಕಾರಿ ಸಚಿವರು ವಾರ್ಷಿಕ 500 ಕೋಟಿ ರೂ.ಖಮಾಯಿ ಸಂಗ್ರಹಿಸುತ್ತಿದ್ದಾರೆ ಎಂದು ಮದ್ಯ ಮಾರಾಟಗಾರರ ಸಂಘ ಆರೋಪ ಮಾಡಿದೆ.
ರಾಜ್ಯ ಸರ್ಕಾರದ ಹಗರಣಗಳ ಪಟ್ಟಿಗೆ ಈಗ ನಿಜಾರ್ಥದಲ್ಲಿ ಕಿಕ್ಕೇರಿದೆ ಎಂದು ವ್ಯಂಗ್ಯವಾಡಿದ್ದಾರೆ.
ಸಿದ್ದರಾಮಯ್ಯನವರೇ ಮಂಥ್ಲಿ ಕಲೆಕ್ಟರ್ ತಿಮ್ಮಾಪುರ ಅವರನ್ನು ಸಂಪುಟದಿಂದ ಕಿತ್ತೊಗೆಯುತ್ತೀರೋ ಅಥವಾ ವರಿಷ್ಠರ ರಾಜಸ್ವ ಕೊರತೆ ನೀಗಿಸಲು ಪಾಲು ಕೇಳುತ್ತೀರೋ ? ಎಂದು ರಾಜ್ಯ ಸರ್ಕಾರದ ವಿರುದ್ಧ ಸುನಿಲ್ ಕುಮಾರ್ ಟೀಕಾ ಪ್ರಹಾರ ನಡೆಸಿದ್ದಾರೆ

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *