ವಿಟ್ಲ: ಉಕ್ಕಿನಡ್ಕ ಸಮೀಪದ ಏಳ್ಕನದ ಮನೆಯೊಂದರ ಬಳಿಯಿರುವ ಅಡಿಕೆ ತೋಟದ ಕೆರೆಗೆ ಬಿದ್ದು ತಾಯಿ ಹಾಗೂ ಎರಡು ವರ್ಷದ ಮಗು ಸಾವಿಗೀಡಾದ ಘಟನೆ ಶುಕ್ರವಾರ ಸಂಜೆ ಸಂಭವಿಸಿದೆ.ಉಕ್ಕಿನಡ್ಕ ಬಳಿಯ ಏಳ್ಕನ ದಟ್ಟಿಗೆಮೂಲೆ ನಿವಾಸಿ ಈಶ್ವರ ನಾಯ್ಕ ಅವರ ಪತ್ನಿ ಪರಮೇಶ್ವರಿ(42) ಹಾಗೂ ಪುತ್ರಿ ಪದ್ಮನಿ (2) ಸಾವಿಗೀಡಾದವರು.
ಪರಮೇಶ್ವರಿ ಅವರ ಪತಿ ಮತ್ತು ಪುತ್ರ ಬೆಳಗ್ಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವುದಕ್ಕಾಗಿ ಮನೆಯಿಂದ ಹೊರಕ್ಕೆ ಹೋಗಿದ್ದರು. ಅವರು ಸಂಜೆ ವಾಪಸ್ ಮನೆಗೆ ಬಂದಾಗ ತಾಯಿ ಮತ್ತು ಮಗು ಅಲ್ಲಿ ಕಾಣದೇ ಇದ್ದಾಗ ಪರಿಸರದಲ್ಲಿ ಹುಡುಕಾಡಿದರು. ಈ ವೇಳೆ ಕೆರೆಯಲ್ಲಿ ತಾಯಿ-ಮಗು ಪತ್ತೆಯಾಗಿದ್ದಾರೆ. ವಿಷಯ ತಿಳಿದ ಕೂಡಲೇ ಸ್ಥಳೀಯರು ಅವರನ್ನು ಮೇಲಕ್ಕೆತ್ತಿ ಕಾಸರಗೋಡು ಆಸ್ಪತ್ರೆಗೆ ಕೊಂಡೊಯ್ದರು. ಅಲ್ಲಿಗೆ ತಲುಪುವ ಮೊದಲೇ ಇವರು ಸಾವನ್ನಪ್ಪಿದ್ದರು. ಬೆಳಗ್ಗೆಯೇ ಇವರು ಬಾವಿಗೆ ಬಿದ್ದಿರಬಹುದೆಂದು ಭಾವಿಸಲಾಗಿದೆ.
ಪರಮೇಶ್ವರಿ ಮತ್ತು ಬಾಲಕಿ ಪದ್ಮನಿ ಸಾವಿನ ಬಗ್ಗೆ ಸಂಶಯಾಸ್ಪದ ಸಾವು ಎಂಬುದಾಗಿ ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ನಿರ್ದಿಷ್ಟವಾಗಿ ಸಾವು ಹೇಗೆ ಸಂಭವಿಸಿತು ಎಂಬುದು ಸ್ಪಷ್ಟವಾಗಿಲ್ಲ. ಆದರೆ ಮಗು ಆಟವಾಡುತ್ತಾ ಕೆರೆ ಬದಿಗೆ ಹೋಗಿ ಬಿದ್ದಿರುವ ಬಗ್ಗೆ ಶಂಕೆ ಇದೆ. ಮಗು ಬಿದ್ದಿರುವುದು ಗೊತ್ತಾದ ಕೂಡಲೇ ತಾಯಿ ರಕ್ಷಣೆಗೆಂದು ಕೆರೆಗೆ ಹಾರಿದಾಗ ಇಬ್ಬರೂ ಮುಳುಗಿರುವ ಸಾಧ್ಯತೆ ಇದೆ. ತಾಯಿಗೆ ಈಜು ಕೂಡ ಬರುತ್ತಿರಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
